ಕರ್ನಾಟಕ

karnataka

ETV Bharat / state

ಇನ್ನೇನು ಕೆಲ ಹೊತ್ತಿನಲ್ಲಿ ಮುಂಬೈನಿಂದ ಬೆಂಗಳೂರಿಗೆ ಆಗಮಿಸಲಿರುವ ಅತೃಪ್ತ ಶಾಸಕರು

ಸುಪ್ರೀಂಕೋರ್ಟ್ ಈಗಾಗಲೇ ಸೂಚನೆ ನೀಡಿದ್ದು, ಇಂದು ಸಂಜೆ 6 ಗಂಟೆಯ ಒಳಗೆ ರಾಜೀನಾಮೆ ಪತ್ರವನ್ನು ಸಲ್ಲಿಸಲು ಅತೃಪ್ತ ಶಾಸಕರು ಮುಂಬೈನಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದು, ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ.

ಅತೃಪ್ತ ಶಾಸಕರು

By

Published : Jul 11, 2019, 1:54 PM IST

ಬೆಂಗಳೂರು: ರಾಜೀನಾಮೆ ನೀಡಿರುವ ಹತ್ತು ಮಂದಿ ರೆಬೆಲ್ ಶಾಸಕರು ಕಳೆದ ಮೂರ್ನಾಲ್ಕು ದಿನಗಳಿಂದ ಮುಂಬೈನಲ್ಲಿ ತಂಗಿದ್ದು, ಇಂದು ಮಧ್ಯಾಹ್ನ ಮುಂಬೈ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲು ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಬಂದೋಬಸ್ತ್:

ಸಂಜೆ 4 ಗಂಟೆಗೆ ಅತೃಪ್ತ ಶಾಸಕರು ಬೆಂಗಳೂರನ್ನು ತಲುಪಲಿದ್ದಾರೆ ಎಂದು ತಿಳಿದು ಬಂದಿದೆ. ಅತೃಪ್ತರಿಗೆ ನಿಲ್ದಾಣದಿಂದಲೇ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಅಲ್ಲಿಂದ ಕಾಂಗ್ರೆಸ್ ನಾಯಕರ ಕೈಗೆ ಸಿಗದ ರೀತಿ ಆಗಮಿಸಲಿದ್ದಾರೆ. ಸುಪ್ರೀಂಕೋರ್ಟ್ ಈಗಾಗಲೇ ಸೂಚನೆ ನೀಡಿದ್ದು, ಎಲ್ಲ ಶಾಸಕರು ತಮಗೆ ಇಷ್ಟ ಇದ್ದಲ್ಲಿ ಮತ್ತೊಮ್ಮ ಕ್ರಮಬದ್ಧವಾಗಿ ಇಂದು ಸಂಜೆ 6 ಗಂಟೆಯ ಒಳಗೆ ರಾಜೀನಾಮೆ ಪತ್ರವನ್ನು ಸಲ್ಲಿಸಲು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ 5 ಶಾಸಕರು ಸೇರಿದಂತೆ ಎಲ್ಲ ಶಾಸಕರು ಮುಂಬೈನಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ.

ಸದ್ಯ ಈ ಹಿಂದೆ ರಾಜೀನಾಮೆ ಸಲ್ಲಿಕೆಗೆ ಮುಂದಾಗಿ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದ ನಾಲ್ವರು ಶಾಸಕರ ವಿರುದ್ಧ ಸ್ಪೀಕರ್​ಗೆ ಕಾಂಗ್ರೆಸ್​​ ದೂರು ಸಲ್ಲಿಸಿತ್ತು. ಅದರಲ್ಲಿ ಈಗಾಗಲೇ ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕಾರವಾಗಿದ್ದು, ಯಾವುದೇ ರೀತಿಯ ಕ್ರಮ ಕೈಗೊಳ್ಳುವ ವ್ಯಾಪ್ತಿಗೆ ಅವರು ಬರುತ್ತಿಲ್ಲ. ಇನ್ನು ಉಳಿದ ಮೂವರಲ್ಲಿ ನಾಗೇಂದ್ರ ಇದುವರೆಗೂ ರಾಜೀನಾಮೆ ನೀಡದೇ ಪಕ್ಷಕ್ಕೆ ನಿಷ್ಠರಾಗಿ ಮುಂದುವರಿದಿದ್ದು, ಇವರ ವಿರುದ್ಧ ಕ್ರಮ ಕೈ ಬಿಡಲು ಕಾಂಗ್ರೆಸ್ ನಿರ್ಧರಿಸಿದೆ. ಹೀಗಾಗಿ ಉಳಿದ ಇಬ್ಬರು ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಅನರ್ಹತೆಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಇಂದು ಸಂಜೆಯೊಳಗೆ ಸ್ಪೀಕರ್ ಈ ಸಂಬಂಧ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಈ ನಡುವೆಯೇ ರಾಜ್ಯಪಾಲ ವಜುಭಾಯಿ ವಾಲಾ ಅವರು ತುರ್ತು ನಿರ್ಧಾರ ಕೈಗೊಂಡಿದ್ದು, ರಾಜ್ಯ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಸಾಧ್ಯತೆ ಇರುವ ಹಿನ್ನೆಲೆ ಯಾವುದೇ ರೀತಿಯ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬೇಡಿ ಎಂದು ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ. ಒಂದೊಮ್ಮೆ ಇದು ನಿಜವಾದಲ್ಲಿ ಸ್ಪೀಕರ್ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೆ ಮೈತ್ರಿ ಸರ್ಕಾರ ಯಾವುದೇ ರೀತಿಯ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಅವಕಾಶ ಇರುವುದಿಲ್ಲ. ರಾಜ್ಯಪಾಲರ ಈ ಕ್ರಮ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಆಗಮಿಸುತ್ತಿರುವ ಶಾಸಕರನ್ನು ಸಂಪರ್ಕಿಸುವುದು ಹಾಗೂ ಇಬ್ಬರು ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವುದು ಕೂಡ ಕಾಂಗ್ರೆಸ್ ಅಥವಾ ಮೈತ್ರಿ ಸರ್ಕಾರಕ್ಕೆ ಕಷ್ಟವಾಗಿ ಪರಿಣಮಿಸಲಿದೆ.

For All Latest Updates

TAGGED:

ABOUT THE AUTHOR

...view details