ಬೆಂಗಳೂರು:ಆಧಾರ್ ಕಾರ್ಡ್ ಮಾಡಿಸಲು ತೆರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಮೂರು ಮಕ್ಕಳು ಹಾಗೂ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಬಳಿ ನಡೆದಿದೆ.
ಆಧಾರ್ ಕಾರ್ಡ್ ಮಾಡಿಸಲು ತೆರಳುತ್ತಿದ್ದಾಗ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ
ಆಧಾರ್ ಕಾರ್ಡ್ ಮಾಡಿಸಲು ತೆರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ನಿವಾಸಿಗಳಾದ ಜೊಯಾ (05), ಸಾಜಿಯಾ (08), ಸಾನಿಯಾ (17) ಹಾಗೂ ಹಸೀನಾ (30) ಮೃತ ದುರ್ದೈವಿಗಳು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಆಧಾರ್ ಕಾರ್ಡ್ ಮಾಡಿಸಲು ಆಟೋದಲ್ಲಿ ತೆರಳುತ್ತಿದ್ದ ವೇಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇನ್ನೂ 7 ಜನರಿಗೆ ಗಂಭೀರ ಗಾಯಗಳಾಗಿದ್ದು, ದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಕುರಿತು ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಕ್ಬರ್ ಅಲಿಖಾನ್ ಮಾತನಾಡಿ, ಬೆಳಗ್ಗೆ ಏಳು ಗಂಟೆಗೆ ಊರಿಂದ ಜಿಲ್ಲಾ ಕಚೇರಿಗೆ ಆಧಾರ್ ಕಾರ್ಡ್ ಮಾಡಿಸಲು ಹೋಗುತ್ತಿದ್ದಾಗ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ಕು ಜನರು ಸಾವನ್ನಪ್ಪಿದ್ದು, ಇದಕ್ಕೆ ಸರ್ಕಾರ ನೇರ ಹೊಣೆಯಾಗಿದೆ. ಎಲ್ಲಾ ಪಂಚಾಯಿತಿಯಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವ ವ್ಯವಸ್ಥೆ ಮಾಡದೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡುತ್ತಿದ್ದಾರೆ. ಸರಿಯಾದ ಬಸ್ ಸೌಕರ್ಯ ಇಲ್ಲದೇ ಈ ರೀತಿ ಆಟೋದಲ್ಲಿ ಪ್ರಯಾಣಿಸುವ ಸ್ಥಿತಿ ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ದೂರಿದರು.
TAGGED:
Devanahalli