ಬೀದರ್ : ಹುಮನಾಬಾದ್ ತಾಲೂಕಿನ ಕಪ್ಪರಗಾಂವ ಕ್ರಾಸ್ ಬಳಿ ನಡೆದ ರಸ್ತೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದರೋಡೆಕೋರರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ತಿಳಿಸಿದ್ದಾರೆ .
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದರೋಡೆಕೋರರ ಬಗ್ಗೆ ಸುಳಿವು ಸಿಕ್ಕಿದೆ. ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದ್ದು, ಅತಿ ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಮಾಹಿತಿ ನೀಡಿದರು.
ಏನಿದು ಘಟನೆ?
ಸೋಮವಾರ ರಾತ್ರಿ ಕಪ್ಪರಗಾಂವ ಬಳಿ ಲಾರಿಯನ್ನು ತಡೆದು, ಚಾಲಕನಿಗೆ ಚಾಕು ತೋರಿಸಿ ಆತನಿಂದ 5ಸಾವಿರ ರೂ. ನಗದು ಹಣ ಹಾಗೂ ಮೊಬೈಲ್, ಎಟಿಎಂ ಕಾರ್ಡ್ ಕಸಿದುಕೊಂಡು ಕಾರಿನಲ್ಲಿ ಪರಾರಿಯಾಗಿತ್ತು. ಮಾಹಿತಿ ಅರಿತ ಹಳ್ಳಿಖೇಡ ಠಾಣೆ ಪೊಲೀಸರ ತಂಡ ದರೋಡೆಕೋರರ ಬೆನ್ನು ಹತ್ತಿದಾಗ ಅವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪಿಎಸ್‌ಐ ಮಹಾಂತೇಶ ಪಾಟೀಲ್, ತಮ್ಮ ರಿವಾಲ್ವರ್ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ.
ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋದ ಸ್ಥಳ ಪರಿಶೀಲನೆ ಮಾಡಿದ ಎಸ್ಪಿ ದರೋಡೆಗೆ ಬಳಸಿದ್ದು ಕದ್ದ ಕಾರು:ದರೋಡೆಗೆ ಬಳಸಿದ ಕಾರು ಹೈದರಾಬಾದ್ನಿಂದ ಕಳವು ಮಾಡಿಕೊಂಡು ಬರಲಾಗಿದೆಯಂತೆ. ಅಲ್ಲಿನ ಖಾಸಗಿ ಸಂಸ್ಥೆಗೆ ಸೇರಿದ ಮಾರುತಿ ಇಟಿಯೋಸ್ ಕಾರನ್ನು ಈ ದರೋಡೆಕೋರರು ಕಳೆದ 21 ರಂದು ಕದ್ದು ತಂದಿದ್ದರು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.