ಬೀದರ್ : ಈಜಲು ಹೋದ ಯುವಕರಿಬ್ಬರು ಜಲ ಸಮಾಧಿಯಾದ ಘಟನೆ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಫಾತಿಮಾಪೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಇಸ್ಮಾಯಿಲ್ (21) ಹಾಗೂ ಸಮಿರ(26) ಸಾವನಪ್ಪಿರುವ ದುರ್ದೈವಿಗಳು. ಇಂದು ಬೆಳಗ್ಗೆ ಕಲ್ಲು ಕ್ವಾರಿಯ ಹೊಂಡದಲ್ಲಿ ಇಬ್ಬರು ಯುವಕರು ಈಜಾಡಲು ತೆರಳಿದ್ದು ಈ ವೇಳೆ ನೀರಲ್ಲೇ ಮುಳುಗಿ ಸಾವನ್ನಪ್ಪಿದ್ದಾರೆ.
ಮಾಹಿತಿ ಪಡೆದ ಅಗ್ನಿ ಶಾಮಕ ದಳ ಹಾಗೂ ಚಿಟಗುಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತ ದೇಹಗಳನ್ನು ಹೊಂಡದಿಂದ ಹೊರ ತೆಗೆದಿದ್ದಾರೆ. ಶವಗಳನ್ನು ಮೇಲಕ್ಕೆತ್ತುವ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದರು. ಸಾವನ್ನಪ್ಪಿರುವ ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಕೆಂಪು ಕಲ್ಲು ಗಣಿಗಾರಿಕೆ ಮಾಡಿ ಹೊಂಡ ಮಾಡುತ್ತಿರುವ ಕಾರಣ ಸರಣಿ ದುರಂತಗಳು ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಇದಕ್ಕೂ ಮುನ್ನ ಕಳೆದ ವಾರ ಬೇಮಳಖೇಡ ಗ್ರಾಮದಲ್ಲಿ ಇಬ್ಬರು ಬಾಲಕರು ನೀರು ಪಾಲಾಗಿದ್ದರು. ಆ ಘಟನೆ ಮಾಸುವ ಮೊದಲೇ ಇಂದು ಮತ್ತೊಂದು ದುರ್ಘಟನೆ ನಡೆದಿದೆ. ಸದ್ಯ ಚಿಟಗುಪ್ಪ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಯುಕೆ ಪ್ರಜೆ ಸಾವು