ಬೀದರ್:ಬರದಿಂದ ಕೆರೆ, ನದಿ, ಕಾಲುವೆಗಳೆಲ್ಲ ಬತ್ತಿ ಹೋಗಿರುವ ಬೀದರ್ ಜಿಲ್ಲೆಯಲ್ಲೀಗ ಅಕ್ರಮ ಮರಳು ಸಾಗಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಕೆಲ ಅಧಿಕಾರಿಗಳ ಕುಮ್ಮಕ್ಕಿನಿಂದ ಹಳ್ಳ, ನದಿ ಒಡಲನ್ನು ಬಗೆದು ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಾರಂಜಾ ಜಲಾಶಯದಿಂದ ಹರಿದು ಬರುವ ನೀರು ಬತ್ತಿ ಹೋಗಿದ್ದರಿಂದ ಭಾಲ್ಕಿ ತಾಲೂಕಿನ ಕುಂಟೆ ಸಿರ್ಸಿ ಗ್ರಾಮದ ಹೊರ ವಲಯದಲ್ಲಿ ಮರಳು ಚೋರರು ಅಡ್ಡೆ ಮಾಡಿಕೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳು ಸೇರಿದಂತೆ ಒಂದಿಷ್ಟು ಜನ ಪುಡಾರಿಗಳ ಕೈ ಬಿಸಿ ಮಾಡಿ ಸಂಪತ್ತನ್ನು ಸಾಮೂಹಿಕವಾಗಿ ಲೂಟಿ ಮಾಡುತ್ತಿದ್ದಾರೆ. ಹತ್ತಕ್ಕೂ ಅಧಿಕ ಟ್ರ್ಯಾಕ್ಟರ್ಗಳು ಒಂದೊಂದು ಭಾಗದಲ್ಲಿ ಕೆಲಸ ಮಾಡಿದ್ರೆ, ಮರಳನ್ನ ಅಗೆದು ಒಂದೆಡೆ ಸಂಗ್ರಹಿಸಿಡುವ ಕೆಲಸವನ್ನು ಕೆಲ ಕಾರ್ಮಿಕರು ಮಾಡ್ತಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರೇ ಸೆರೆ ಹಿಡಿದು 'ಈಟಿವಿ ಭಾರತ'ಕ್ಕೆ ನೀಡಿದ್ದಾರೆ.
ಇದಷ್ಟೆ ಅಲ್ಲದೆ ಜಿಲ್ಲೆಯ ಜೀವನದಿ ಮಾಂಜ್ರಾದಲ್ಲೂ ಸಾಮೂಹಿಕವಾಗಿ ಅಕ್ರಮ ಮರಳು ಸಾಗಾಟ ವ್ಯಾಪಕವಾಗಿದೆ. ಭಾಲ್ಕಿ ತಾಲೂಕಿನ ಬಿರಿ(ಬಿ), ಮೇಹಕರ, ಸಾಯಗಾಂವ್, ಲಖನಗಾಂವ್ ಗ್ರಾಮದ ಸಮಿಪದಲ್ಲಿ ನದಿ ಒಡಲಿನಿಂದ ಮರಳನ್ನ ಲೂಟಿ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.