ಬಸವಕಲ್ಯಾಣ/ ಬೀದರ್: ನಗರದ ತ್ರಿಪುರಾಂತ ಹಾಗೂ ಹುಲಸೂರ ರಸ್ತೆಯಲ್ಲಿನ ಹೋಟೆಲ್, ಡಾಬಾ ಹಾಗೂ ಗ್ಯಾರೇಜ್‌ಗಳ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ ಮೂವರು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ನಗರದ ತ್ರಿಪುರಾಂತ ಹಾಗೂ ಹುಲಸೂರ ರಸ್ತೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಚಂದ್ರಕಾಂತ ಜಾಧವ ಅವರ ನೇತೃತ್ವದಲ್ಲಿ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ, ಬಾಲ ಕಾರ್ಮಿಕರನ್ನು ಪತ್ತೆ ಮಾಡಿ ರಕ್ಷಿಸಿದೆ. ದಾಳಿ ವೇಳೆ ರಕ್ಷಣೆ ಮಾಡಲಾದ ಓರ್ವ ಬಾಲಕನನ್ನು ಪಾಲಕರಿಗೆ ಒಪ್ಪಿಸಿದ್ದು, ಇಬ್ಬರು ಮಕ್ಕಳನ್ನು ಪಾಲನೆ ಪೋಷಣೆಗಾಗಿ ಬೀದರ್‌ನ ಬಾಲ ಮಂದಿರಕ್ಕೆ ಕಳಿಸಲಾಗಿದೆ.
ಅಧಿಕಾರಿಗಳಿಂದ ಮೂರು ಬಾಲ ಕಾರ್ಮಿಕರ ರಕ್ಷಣೆ.. 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ, ಯಾವುದೇ ಕಾರಣಕ್ಕೂ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳಬಾರದು ಎಂದು ಹೋಟೇಲ್‌ಗಳ ಮಾಲೀಕರಿಗೆ ತಾಕೀತು ಮಾಡಿದರು. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತಿದ್ದವರ ಮೇಲೆ ಪ್ರಕರಣ ದಾಖಲಿಸಲಾಗುವದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಡಿಪಿಓ ಶಾರದಾ ಕಲ್ಮಾಕರ್, ಕಾರ್ಮಿಕ ಇಲಾಖೆ ಅಧಿಕಾರಿ ಕವಿತಾ, ಕಾರ್ಮಿಕ ನಿರ್ಮೂಲನೆ ಅಧಿಕಾರಿ ಅರ್ಜುನ ಶಿತಾಳಗೇರೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ವಿನೋದ ಕುರೆ, ನರಸಿಂಗ್ ಕರಾಳೆ, ಮಕ್ಕಳ ಸಹಾಯವಾಣಿ ಸಿಬ್ಬಂದಿ ನೀಲಕಂಠ ವಗದಾಳೆ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.