ಬೀದರ್ :ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಾತ್ರಿಯಾದಂತಿದೆ. ಹಾಗಾಗಿ ಅವರುಅಭಿಮಾನಿಗಳು ಬೆಂಗಳೂರಿಗೆ ದೌಡಾಯಿಸಿದ್ದಾರೆ.
ಪ್ರಭು ಚೌಹಾಣ್ ಅವರಿಗೆ ಮಂತ್ರಿ ಭಾಗ್ಯ ಸಾಧ್ಯತೆ.. ಬೆಂಗಳೂರಿನತ್ತ ಅಭಿಮಾನಿಗಳ ದಂಡು!
ಸಂಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆ ನಾಳೆ ಸಂಪುಟ ರಚಣೆಯಾಗಲಿದೆ. ಬೀದರ್ ಶಾಸಕ ಪ್ರಭು ಚೌಹಾಣ್ ಅವರಿಗೆ ಮಂತ್ರಿ ಭಾಗ್ಯ ವಲಿಯುವ ಸಾಧ್ಯತೆಯಿದೆ. ಅದೇ ಕಾರಣಕ್ಕಾಗಿ ಅವರ ಅಭಿಮಾನಿಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ನಾಳೆ ಸಂಪುಟ ರಚನೆಯಾಗ್ತಿದ್ದು ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಪ್ರಭು ಚೌಹಾಣ್ ಅವರು ಹೈದರಾಬಾದ್ ಕರ್ನಾಟಕ ಭಾಗದಲ್ಲೇ ಹಿರಿಯ ಶಾಸಕರಾಗಿದ್ದಾರೆ. ಬೀದರ್ ಜಿಲ್ಲೆಯ ಒಟ್ಟು 6 ವಿಧಾನಸಭೆ ಕ್ಷೇತ್ರಗಳ ಪೈಕಿ ಜಿಲ್ಲೆಯ ಏಕೈಕ ಬಿಜೆಪಿ ಶಾಸಕರಾಗಿದ್ದು, ಬಂಜಾರಾ ಸಮುದಾಯದ ಪ್ರಬಲ ನಾಯಕರಾಗಿರುವ ಪ್ರಭು ಚೌಹಾಣ್ ಅವರಿಗೆ ಜಾತಿವಾರು, ಪ್ರಾಂತ್ಯವಾರು, ಜಿಲ್ಲಾವಾರು, ರಾಜಕೀಯವಾಗಿ ಹಿರಿತನ ಹಾಗೂ ಪಕ್ಷದ ನಿಷ್ಠತೆಯನ್ನು ಮಾನದಂಡವಾಗಿಟ್ಟುಕೊಂಡು ಮಂತ್ರಿ ಭಾಗ್ಯ ಸಿಗಲಿದೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.
ಪ್ರಭು ಚೌಹಾಣ್ ಅವರು ಸಚಿವರಾಗ್ತಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಔರಾದ್, ಬೀದರ್, ಮುಂಬೈ, ಹೈದರಾಬಾದ್ ಭಾಗದಲ್ಲಿರುವ ಅವರ ಅಭಿಮಾನಿಗಳು ಬೆಂಗಳೂರಿನತ್ತ ತಂಡೋಪ ತಂಡವಾಗಿ ಹೊರಟಿದ್ದಾರೆ. ನಾಳೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.