ಬೀದರ್:ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮೇಲೆ ಪ್ರಥಮ ಬಾರಿಗೆ ಕಲಬುರಗಿ ನಗರಕ್ಕೆ ಡಿ.10ರಂದು ಆಗಮಿಸಲಿದ್ದಾರೆ. ಹೀಗಾಗಿ ಅವರನ್ನು ಸನ್ಮಾನಿಸಿ ಗೌರವಿಸಲು ಹಾಗೂ 371(ಜೆ) ಸಮಾವೇಶ ಕುರಿತು ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಚಿದ್ರಿಯಲ್ಲಿನ ರಹಿಂ ಖಾನ್ ಫಾರ್ಮ್ ಹೌಸ್‍ನಲ್ಲಿ ನಡೆದ ವಿಭಾಗ ಮಟ್ಟದ ಕಾಂಗ್ರೆಸ್ ಮುಖಂಡರ ಪೂರ್ವಸಿದ್ಧತಾ ಸಭೆಯಲ್ಲಿ ಖಂಡ್ರೆ ಮಾತನಾಡಿದರು. ನುಡಿದಂತೆ ನಡೆಯುವ ಮಲ್ಲಿಕಾರ್ಜುನ ಖರ್ಗೆ ಅವರ ಸನ್ಮಾನ ಕಾರ್ಯಕ್ರಮವು ಅದ್ಧೂರಿಯಾಗಿ ಮಾಡಲು ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರ್ಗೆಯವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ:ಸಿ ಟಿ ರವಿ ವಿರುದ್ಧ ಕಾಂಗ್ರೆಸ್ ಮುಖಂಡ ತಾಳಿಕಟ್ಟೆ ಲೋಕೇಶ್ ವಾಗ್ದಾಳಿ
ಶಾಸಕ ರಹಿಂ ಖಾನ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿರುವ ಕೆಲಸದಿಂದಾಗಿ, ಪಕ್ಷದ ಮೇಲಿನ ಅವರ ಬದ್ಧತೆಯಿಂದ, ಜನಸೇವೆಯ ಮನೋಭಾವ ಹೊಂದಿರುವುದರಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಕಡಿಮೆ ಮಾತನಾಡಿ, ಹೆಚ್ಚಿನ ಕೆಲಸ ಮಾಡುವುದು ಖರ್ಗೆ ಅವರ ಶೈಲಿಯಾಗಿದೆ. ಕೊಟ್ಟ ಮಾತಿಗೆ ಎಂದೂ ತಪ್ಪಿ ನಡೆದಿಲ್ಲ ಅವರು. ಅವೆಲ್ಲವುಗಳ ಪ್ರತಿಫಲವಾಗಿ ಇಂದು ಎಐಸಿಸಿ ಅಧ್ಯಕ್ಷರಾಗಿ ಹೊರ ಹೊಮ್ಮಿದ್ದಾರೆ. ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಡಿ.10 ರಂದು ಕಲಬುರಗಿಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.
ಸಮಾವೇಶದಲ್ಲಿ ಬೀದರ್ ಜಿಲ್ಲೆಯಿಂದ ಎಷ್ಟು ಜನರು ಪಾಲ್ಗೊಳ್ಳಲ್ಲಿದ್ದಾರೆ, ಎಲ್ಲರೂ ಹೊರಡಲು ವಾಹನಗಳ ವ್ಯವಸ್ಥೆ ಮತ್ತು ಕಾರ್ಯಕ್ರಮವನ್ನು ಯಾವ ರೀತಿಯಾಗಿ ಏರ್ಪಾಡು ಮಾಡಬೇಕೆಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅನೇಕ ಮುಖಂಡರು ಸಭೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.