ಬಸವಕಲ್ಯಾಣ: ಜಗತ್ತಿಗೆ ಶಾಂತಿ, ಸಮಾನತೆ ಹಾಗೂ ಪ್ರಜಾಪ್ರಭುತ್ವದ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ ತತ್ವ ಚಿಂತನೆಗಳ ಪ್ರಭಾವಕ್ಕೊಳಗಾದ ಇಸ್ಲಾಂ ಧರ್ಮೀಯ ವ್ಯಕ್ತಿಯೊಬ್ಬರು ಜಂಗಮ ದೀಕ್ಷೆ ಪಡೆದು ಬಸವತತ್ವ ಪ್ರಚಾರಕ್ಕಾಗಿ ಜೀವನ ಸಮರ್ಪಿಸಿದ ಪ್ರಸಂಗ ನಡೆದಿದೆ.
ಸದ್ಗುರು ಬಸವಪ್ರಭು ಶ್ರೀಗಳ ಜೊತೆ ಲಿಂಗದೀಕ್ಷೆ ಪಡೆದ ಮಹಮ್ಮದ್ ನಿಸಾರ್ ಕೆಲ ವರ್ಷಗಳ ಹಿಂದೆಯೇ ಲಿಂಗದೀಕ್ಷೆ ಪಡೆದಿದ್ದ ಇವರಿಗೆ ಬಸವ ಮಹಾಮನೆಯಲ್ಲಿ ಬಸವಪ್ರಭು ಸ್ವಾಮೀಜಿ ಜಂಗಮ ದೀಕ್ಷೆ ನೀಡಿದರು. ಆಗಸ್ಟ್ 15 ರಂದು 74ನೇ ಸ್ವಾತಂತ್ರ ದಿನಾಚರಣೆ ದಿನ ಜಂಗಮ ದೀಕ್ಷೆ ಹೊಂದಿ ಬಸವ ತತ್ವಕ್ಕಾಗಿ ತಮ್ಮನ್ನು ಅಧಿಕೃತವಾಗಿ ತೊಡಗಿಸಿಗೊಂಡಿದ್ದಾರೆ.
ನಿಸಾರ್, ಮೂರು ವರ್ಷಗಳ ಕಾಲ ಬಸವತತ್ವ ಅಧ್ಯಯನ ಕೈಗೊಂಡಿದ್ದು ಚಿಕ್ಕ ವಯಸ್ಸಿನಲ್ಲಿ ಅಪಾರ ಜ್ಞಾನಗಳಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಬಸವಧರ್ಮ ಪೀಠದ ಪೀಠಾಧ್ಯಕ್ಷ ಡಾ. ಮಾತೆ ಗಂಗಾದೇವಿ ಜಂಗಮವಾಣಿ ಮೂಲಕ ಪ್ರತಿಜ್ಞೆ ಬೋಧಿಸಿ ನಿಸಾರ್ ಅವರಿಗೆ 'ಸದ್ಗುರು ನಿಜಲಿಂಗ ಸ್ವಾಮೀಜಿ' ಎಂದು ನಾಮಕರಣ ಮಾಡಿದ್ದಾರೆ.
ಇದೇ ವೇಳೆ 'ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ' ಎನ್ನುವ ಜೋಳಿಗೆಯಲ್ಲಿ ವಚನ ಸಾಹಿತ್ಯವನ್ನು ನೀಡುವ ಮೂಲಕ ಶರಣ ತತ್ವದ ತಳಹದಿಯ ಮೇಲೆ ಬದುಕು ಸಾಗಿಸುವ ಜೊತೆಗೆ ಸಮಾಜಕ್ಕೆ ಬೆಳಕು ನೀಡುವ ಮಹಾನ್ ಜ್ಯೋತಿಯಾಗಬೇಕು ಎಂದು ಹೇಳಿ ಶುಭ ಹಾರೈಸಿದರು.
ನಗರದ ಹೊರವಲಯದಲ್ಲಿರುವ ಬಸವಧರ್ಮ ಪೀಠದ ಬಸವ ಮಹಾಮನೆಯಲ್ಲಿ ನಡೆದಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಶ್ರೀಶೈಲ ಕಾಳಿ ವಹಿಸಿದ್ದರು. ಅಲ್ಲಮ ಪ್ರಭು ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ, ಪ್ರಮುಖರಾದ ಸಿದ್ಧರಾಮಪ್ಪ ಹಂಗರಗಿಕರ್, ಶೇಷಮ್ಮ, ಗಣೇಶ ಪಾಟೀಲ, ಶಿವರಾಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.