ಬೀದರ್: ಗೋ ಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಸಹಾಯವಾಣಿ ಕೇಂದ್ರ, ಪಶು ಸಂಜೀವಿನಿ ಹಾಗೂ ಜಿಲ್ಲೆಗೊಂದು ಗೋ ಶಾಲೆ ಆರಂಭಿಸಿರುವ ಪಶು ಸಂಗೋಪನಾ ಇಲಾಖೆ ಜವಾಬ್ದಾರಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ನೀಡಿದ್ದಕ್ಕೆ ಸಚಿವ ಪ್ರಭು ಚೌಹಾಣ್ ಸಂತಸ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರೊನಾ ಮೂರನೇ ಅಲೆ ನಿಯಂತ್ರಣ ಕುರಿತು ನಡೆಸಿದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶು ಸಂಗೋಪನಾ ಇಲಾಖೆಯಲ್ಲಿ ಸಾಕಷ್ಟು ಅಪೂರ್ಣ ಯೋಜನೆಗಳಿದ್ದವು. ಮತ್ತೊಮ್ಮೆ ಅದೇ ಖಾತೆ ನೀಡಿದ್ದಕ್ಕೆ ಆ ಎಲ್ಲಾ ಯೋಜನೆಗಳು ಯಥಾವತ್ತಾಗಿ ಅನುಷ್ಠಾನ ಮಾಡಲಿಕ್ಕೆ ಸಾಧ್ಯವಾಗಲಿದೆ ಎಂದರು.
ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಪ್ರಭು ಚೌಹಾಣ್.. ರಾಜ್ಯದಲ್ಲಿ ಕೊರೊನಾ 3ನೇ ಅಲೆ ಯಾವುದೇ ಕಾರಣಕ್ಕೂ ಬರಬಾರದು. ಅದಕ್ಕಾಗಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕಾಗಿದೆ. ಗಡಿಯಲ್ಲಿ ಚೆಕ್ ಪೋಸ್ಟ್ಗಳನ್ನು ಹಾಕಲಾಗಿದೆ. ಜಿಲ್ಲೆ ಪ್ರವೇಶ ಮಾಡುವವರಿಗೆ ಕಡ್ಡಾಯವಾಗಿ ನೆಗೆಟಿವ್ ವರದಿ ಇರಲೇಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬೀದರ್ ಹೊರ ವಲಯದ ನೌಬಾದ್ ಬಳಿ ಜಿಲ್ಲಾ ಸಂಕೀರ್ಣ ನಿರ್ಮಾಣ ಮಾಡಲಾಗ್ತಿದೆ. ಆದ್ರೆ, ಕೆಲವರು ರಾಜಕೀಯ ಪ್ರೇರಿತರಾಗಿ ಇದಕ್ಕೆ ವಿರೋಧಿಸುತ್ತಿದ್ದಾರೆ. ಈಗಿರುವ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಿರ್ಮಾಣ ಮಾಡಲು ಸಾಧ್ಯವಿಲ್ಲ, ಸ್ಥಳದ ಕೊರತೆಯಾಗಲಿದೆ. 53 ಎಕರೆ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಸುಮಾರು 50 ಕೋಟಿ ವೆಚ್ಚದಲ್ಲಿ ಸಂಕೀರ್ಣ ನಿರ್ಮಾಣ ಮಾಡಲಾಗುವುದು ಎಂದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ್ ಪಾಟೀಲ್, ರಹೀಂಖಾನ್, ಬಂಡೆಪ್ಪ ಕಾಶೆಂಪೂರ್, ಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪೂರೆ, ಅರವಿಂದ ಅರಳಿ ಹಾಗೂ ಚಂದ್ರಶೇಖರ್ ಪಾಟೀಲ್ ಸೇರಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಇದ್ದರು.