ಬಳ್ಳಾರಿ: ಗಣೇಶ ಬಂದ.. ಕಾಯಿ-ಕಡುಬು ತಿಂದ.. ಎಂಬಂತೆ ಗಣಿನಗರಿ ಬಳ್ಳಾರಿಯಲ್ಲಿ 'ಜಿಯೋ' ಆಕರದ ಗಣೇಶಮೂರ್ತಿ ತಲೆಎತ್ತಲಿದೆ.
ಪಶ್ಚಿನ ಬಂಗಾಲ ರಾಜ್ಯದ ಕೊಲ್ಕತ್ತಾ ಮೂಲದ ಯುವಕರ ಕೈ ಚಳಕದಿಂದಲೇ ಈ 'ಜಿಯೋ' ಕಂಪನಿಯ ಸಿಂಬಾಲ್ ಆಕರದ ಮೂರ್ತಿಯು ಜನ್ಮತಾಳಿದೆ. ಅದು ಗಣಿನಗರಿಯ ಸಾರ್ವಜನಿಕರ ವಿಶೇಷ ಗಮನ ಸೆಳೆದಿದೆ. ಬಳ್ಳಾರಿ ನಗರ ಹೊರವಲಯದ ಅಲ್ಲೀಪುರದ ರಾಮೇಶ್ವರಿ ನಗರದ ಮುಖ್ಯದ್ವಾರದ ಬಳಿಯ ಶೆಡ್ನಲ್ಲಿ ಆ 'ಜಿಯೋ' ಕಂಪನಿಯ ಸಿಂಬಾಲ್ ಆಕರದ ಗಣೇಶಮೂರ್ತಿಯನ್ನು ಪಕ್ಕಾ ಮಣ್ಣಿನಿಂದಲೇ ತಯಾರಿಸಲಾಗುತ್ತದೆ. ವೆಸ್ಟ್ ಬೆಂಗಾಲಿ ಮೂಲದ ಮಣ್ಣು ಹಾಗೂ ಬಳ್ಳಾರಿಯ ಮೂಲದ ಮಣ್ಣನ್ನು ಮಿಶ್ರಿತಗೊಳಿಸಿ ತಯಾರಿಸಲಾಗುತ್ತದೆ. ಸೂರ್ಯನ ಕಿರಣಗಳು ಆ ಮೂರ್ತಿಯ ಮೇಲೆ ಬೀಳುವ ಸಲುವಾಗಿಯೇ ಶೆಡ್ನ ಹೊರಾಂಗಣದಲ್ಲಿಡಲಾಗಿದೆ. ಅದು ನೋಡುಗರ ವಿಶೇಷ ಆಕರ್ಷಣೆಯಾಗಿದೆ.
ಗಣಿನಗರಿಯಲ್ಲಿ ತಲೆ ಎತ್ತಲಿದೆ 'ಜಿಯೊ' ಆಕಾರದ ಗಣೇಶ ಸತತ ನಾಲ್ಕು ತಿಂಗಳಕಾಲ ಗಣೇಶ ಮೂರ್ತಿ ತಯಾರಿಕೆ ಶುರು:
ಸತತ ನಾಲ್ಕು ತಿಂಗಳಕಾಲ ವೆಸ್ಟ್ ಬೆಂಗಾಲ್ ರಾಜ್ಯದ ಕೊಲ್ಕತ್ತಾ ಮೂಲದ ಎಂಟುಮಂದಿ ಕಾರ್ಮಿಕರು ಈ ಗಣೇಶಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಅಂದಾಜು ಎಂಭತ್ತಕ್ಕೂ ವಿಶೇಷ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ.
ಪಿಓಪಿ ಗಣೇಶಮೂರ್ತಿಗಳಿಗಿಲ್ಲ ಬೇಡಿಕೆ:
ಪರಿಸ್ನೇಹಿಯಾದ ಮಣ್ಣಿನ ಗಣೇಶಮೂರ್ತಿಗಳಿಗೆ ಇಲ್ಲಿ ಹೆಚ್ಚಾಗಿ ಬೇಡಿಕೆಯಿದೆ. ಪಿಓಪಿ ಗಣೇಶಮೂರ್ತಿಗಳಿಗೆ ಅಷ್ಟೊಂದು ಬೇಡಿಕೆಯಿಲ್ಲ ಎಂದು ಕೊಲ್ಕತ್ತಾ ಮೂಲದ ಕಾರ್ಮಿಕ ದಿಬಾಸ್ ಪಾಲ್ ತಿಳಿಸಿದ್ದಾರೆ.
ಕುಂಬಾರ ಓಣಿಯಲ್ಲಿ ಮಹಿಳೆಯರದ್ದೇ ಸಿಂಹಪಾಲು:
ನಗರದ ಕುಂಬಾರ ಓಣಿಯಲ್ಲಿ ಈ ಗಣೇಶಮೂರ್ತಿಗಳ ತಯಾರಿಕೆಯಲ್ಲಿ ಮಹಿಳೆಯರೇ ಹೆಚ್ಚಾಗಿ ಪಾಲ್ಗೊಂಡಿರೋದು ಕಂಡುಬಂತು. ಸಣ್ಣಮೂರ್ತಿಯಿಂದ ಹಿಡಿದು ದೊಡ್ಡ ಮೂರ್ತಿಗಳವರೆಗೂ ಪದವೀಧರ ವಿದ್ಯಾರ್ಥಿನಿಯಾದ ಗಿರಿಜಾ ತಯಾರಿಸುತ್ತಾರೆ. ಆ ಮೂರ್ತಿಗಳಿಗೆ ಸ್ವತಃ ತಾವೇ ಬಣ್ಣಲೇಪನ ಮಾಡುತ್ತಾಳೆ. ಸತತ ಹತ್ತು ವರ್ಷಗಳಿಂದಲೇ ಈ ಕಾಯಕದಲ್ಲಿ ತೊಡಗಿ ಕೊಂಡಿರುವುದಾಗಿ ಗಿರಿಜಾ ತಿಳಿಸಿದ್ದಾರೆ.
ತೃಪ್ತಿದಾಯಕ ಜೀವನ:
ಅಂದಾಜು ಹನ್ನೆರಡು ಮಂದಿಗೆ ಕೈಕೆಲಸ ನೀಡುವ ಮುಖೇನ ಮಣ್ಣಿನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುವೆ. ನನಗೆ ಸಾಕಷ್ಟು ಉದ್ಯೋಗಾವಕಾಶ ಒದಗಿ ಬಂದರೂ ಕೂಡ ಈ ಗಣೇಶ ಮೂರ್ತಿ ತಯಾರಿಕೆ ಸೇರಿದಂತೆ ಕುಂಬಾರಿಕೆ ವೃತ್ತಿಯಲ್ಲಿ ತೃಪ್ತಿದಾಯಕ ಅನಿಸಿದೆ. ಹೀಗಾಗಿ, ನಾನು ಹೊರಗಡೆ ಕೆಲಸಕ್ಕೆ ಹೋಗಿಲ್ಲ. ಪದವೀಧರೆ ಆದ ನಾನು ಯಾವುದೇ ಕೆಲಸ ಅರಸಿ ಹೋಗದೇ ನಾನೇ ಮತ್ತೊಬ್ಬರಿಗೆ ಕೆಲಸ ನೀಡುವಂತಹ ಶಕ್ತಿಯನ್ನು ಹೊಂದಿರುವೆ ಎಂದು ಗಿರಿಜಾ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.