ಬಳ್ಳಾರಿ :ಇಂದು ನಗರದಲ್ಲಿ ತಾಲೂಕು ಮಟ್ಟದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಅಡಿ ನೇಮಕವಾದ ನಿರೀಕ್ಷಕರ ಟಾಸ್ಕ್ ಪೋರ್ಸ್ ಕಾರ್ಯಕಾರಿ ಸಮಿತಿ ಅಧಿಕಾರಿಗಳು ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ.
ನಗರದ ಎಪಿಎಂಸಿ ಮಾರ್ಕೆಟ್ ಹತ್ತಿರ ಪಂಚರ್ ಶಾಪ್, ಟಿಂಕರಿಂಗ್ ಶಾಪ್, ಗ್ಯಾರೇಜ್ ವುಡ್ ವರ್ಕ್ಸ್ ಶಾಪ್, ಮೆಕ್ಯಾನಿಕ್ ಶಾಪ್ ಇತ್ಯಾದಿ ಅಂಗಡಿ ಉದ್ದಿಮೆಗಳ ಮೇಲೆ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದರು.
ಈ ವೇಳೆ, ಐವರು ಬಾಲ ಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಓರ್ವ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳಿದ ನಾಲ್ಕು ಮಾಲೀಕರ ಮೇಲೆ ಕಾರ್ಮಿಕ ಕಾಯ್ದೆಯಡಿ ನೋಟಿಸ್ ಜಾರಿ ಮಾಡಲಾಗಿದ್ದು, ಮಕ್ಕಳನ್ನು ಪೋಷಕರೊಂದಿಗೆ ಕಳುಹಿಸಲಾಗಿದೆ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಅಧಿಕಾರಿಗಳು ಜಾಗೃತಿ ಮೂಡಿಸಿದರು.
ಈ ದಾಳಿಯಲ್ಲಿ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ 2ನೇ ವೃತ್ತ ಕಾರ್ಮಿಕ ನಿರೀಕ್ಷಕರಾದ ಎಂ.ರವಿದಾಸ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಎ.ಮೌನೇಶ್, 1ನೇ ವೃತ್ತ ಕಾರ್ಮಿಕ ನಿರೀಕ್ಷಕರಾದ ಸಿ.ಎನ್ ರಾಜೇಶ್, ಕ್ಷೇತ್ರಾಧಿಕಾರಿಗಳಾದ ಪಿ.ಎಂ.ಈಶ್ವರಯ್ಯ, ಕಂದಾಯ ನಿರೀಕ್ಷಕರಾದ ಎಸ್ ಸುರೇಶ್, ಶಿಕ್ಷಣ ಇಲಾಖೆಯ ರುದ್ರಮಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಂಗಾಧರ, ಚೈಲ್ಡ್ ಲೈನ್ ಸಿಬ್ಬಂದಿಗಳಾದ ಕಾರ್ತಿಕ್ ಮತ್ತು ಚಂದ್ರಕಲಾ, ಗ್ರಾಮ ಲೆಕ್ಕಾಧಿಕಾರಿಯಾದ ಪ್ರಭುಲಿಂಗ ಸೇರಿದಂತೆ ಇತರರು ಇದ್ದರು.