ಬಳ್ಳಾರಿ: ಒಂದಲ್ಲ,ಎರಡಲ್ಲ ಒಂದೂವರೆ ದಶಕದ ನಂತರ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಕ್ತಿ ಸಿಕ್ಕಂತಾಗಿದೆ. ನಗರದಲ್ಲಿ ಅಂದಾಜು 25- 30 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ.
ಈ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗದೆ ಬಳ್ಳಾರಿ ಮಹಾನಗರ ಪಾಲಿಕೆ ಕಳೆದ 14- 15 ವರ್ಷಗಳ ಕಾಲ ಕೈಚೆಲ್ಲಿ ಕುಳಿತಿತ್ತು. ಆದರೀಗ, ಬೀದಿನಾಯಿಗಳ ಉಪಟಳವನ್ನು ಸೂಕ್ಷ್ಮವಾಗಿ ಗಮನಿಸಿದ ಪಾಲಿಕೆಯು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸದ್ದಿಲ್ಲದೇ ಚಾಲನೆ ನೀಡಿದೆ.
ಈ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕೊಡಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಹಣದ ಬೇಡಿಕೆ ಇಟ್ಟಿರೋದರಿಂದ ಇಷ್ಟು ದಿನಗಳ ಕಾಲ ಶಸ್ತ್ರಚಿಕಿತ್ಸೆ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಇದು ಹಾಲಿ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಸ್ಥಳೀಯ ಎನ್ಜಿಓ ಸಂಸ್ಥೆಯನ್ನ ಈ ಟೆಂಡರ್ ಪ್ರಕ್ರಿಯೆಗೆ ಆಹ್ವಾನಿಸಿ ಅದರ ಮುಖೇನ ಈ ಸಂತಾನಹರಣ ಶಸ್ತ್ರಚಿಕಿತ್ಸೆಯ ಜೊತೆಜೊತೆಗೆ ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಬಳ್ಳಾರಿ ಮಹಾನಗರದಲ್ಲಿ ಬರೋಬ್ಬರಿ 30 ಸಾವಿರಕ್ಕೂ ಅಧಿಕ ಬೀದಿನಾಯಿಗಳಿವೆ ಅಂತ ಅಂದಾಜಿಸಲಾಗಿದೆ. 2007ನೇ ಇಸವಿಯಲ್ಲಿ ಈ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದು ಬಿಟ್ಟರೆ, ಈವರೆಗೂ ಶಸ್ತ್ರಚಿಕಿತ್ಸೆಯೇ ನಡೆದಿಲ್ಲ. ಅದಕ್ಕೆ ಮಹಾನಗರ ಪಾಲಿಕೆ ಇಚ್ಛಾಶಕ್ತಿ ಕೊರತೆಯೇ ಕಾರಣ ಎನ್ನಲಾಗುತ್ತಿದೆ. ಬೀದಿ ನಾಯಿಗಳಿಗೆ ಸಕಾಲದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡದಿರೋದರಿಂದಲೇ ಅವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.