ಬಳ್ಳಾರಿ: 2023ರ ವಿಧಾನಸಭೆ ಚುನಾವಣೆಯನ್ನು ನಾವು ಸಿಎಂ ಬಸವರಾಜ ಬೊಮ್ಮಯಿ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದರು. ಬಿಜೆಪಿ ಅಧಿಕಾರಿಕ್ಕೆ ಬಂದರೆ ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಲು ಆರ್‌ಎಸ್‌ಎಸ್ ಪ್ಲಾನ್ ಮಾಡಿದೆ ಎನ್ನುವ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ನಗರದಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣಾ ಸ್ಪರ್ಧೆ ನಮ್ಮ ಮುಖ್ಯಮಂತ್ರಿಗಳ ಮುಂದಾಳತ್ವದಲ್ಲಿಯೇ ನಡೆಯಲಿದೆ. ಕುಮಾರಸ್ವಾಮಿ ಅವರು ಯಾವುದೇ ದಾಖಲೆ ಬಿಚ್ಚಿಡೋದು ಬೇಕಾಗಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದರು.
ಕುಮಾರಸ್ವಾಮಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಶ್ರೀರಾಮುಲು: ಪ್ರಹ್ಲಾದ್ ಜೋಶಿ ಅವರು ಮೋದಿ ಅವರ ಕ್ಯಾಬಿನೆಟ್ ಅಲ್ಲಿ ಪಾರ್ಲಿಮೆಂಟ್ ಅಫೇರ್ ಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿ ಅವರು ಜನರ ದಿಕ್ಕು ತಪ್ಪಿಸಲು ಪ್ರಹ್ಲಾದ್ ಜೋಶಿ ಅವರು ಸಿಎಂ ಆಗ್ತಾರೆ ಎಂದು ಹೇಳುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದರು. ಇನ್ನು ಕೇಂದ್ರ ನಾಯಕರು ರಾಜ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಕಾರ್ಯಕ್ರಮಗಳಿಗಾಗಿ ಹಲವು ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ. ಇದೇ ತಿಂಗಳು 21 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳ್ಳಾರಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸಂಡೂರಿನಲ್ಲಿ ಶ್ರೀರಾಮುಲು ಹಾಗೂ ಸಂತೋಷ್ ಲಾಡ್‌ರವರ ಬಹಿರಂಗ ಆತ್ಮೀಯತೆಯ ಪ್ರದರ್ಶನದ ಹಿಂದೆ ರಾಜಕೀಯ ಉದ್ಧೇಶಗಳೇನಾದರೂ ಇವೆಯಾ ಎಂಬ ಪ್ರಶ್ನೆಗೆ, ಸಂತೋಷ್ ಲಾಡ್ ಹಾಗೂ ನಾನು ರಾಜಕೀಯ ಹೊರತುಪಡಿಸಿಯೂ ಸ್ನೇಹಿತರು. ಜಾತ್ರೆಗೆ ಹೋದಾಗ ಲಾಡ್ ಸಿಕ್ಕರು, ಸ್ನೇಹ ಮನೋಭಾವನೆಯಿಂದ ಅಪ್ಪಿಕೊಂಡಿದ್ದೇನೆ ಅಷ್ಟೇ. ರಾಜಕೀಯದಿಂದ ಅಥವಾ ಯಾವುದೇ ಉದ್ದೇಶಕ್ಕೆ ಅಪ್ಪಿಕೊಂಡಿಲ್ಲ ಎಂದು ಶ್ರೀರಾಮುಲು ಹೇಳಿದರು.