ಬಳ್ಳಾರಿ:ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮ ಹೊರವಲಯದ ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆ ಕುರಿತು ಟ್ವಿಟರ್ ಮೂಲಕ ದೂರು ಬಂದ ಹಿನ್ನೆಲೆಯಲ್ಲಿ ಅಲ್ಲಿನ ಡಿಹೆಚ್‌ಒಗೆ ದೂರವಾಣಿ ಕರೆ ಮಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿಯೊಂದಿಗೆ ಅಂದಾಜು 1.19 ನಿಮಿಷಗಳ ಕಾಲ ದೂರವಾಣಿ ಮೂಲಕ ಮಾತನಾಡಿದ ಸಚಿವ ಶ್ರೀರಾಮುಲು, ಕ್ವಾರಂಟೈನ್ ಕ್ಲೀನ್ ಇಲ್ಲ, ಎಲ್ಲಾ ಫೋಟೋಗಳು ನನಗೆ ಬಂದಿವೆ. ಅವುಗಳನ್ನ ಟ್ವಿಟರ್ ಖಾತೆಯಲ್ಲಿ ಹಾಕಿ ಟ್ವೀಟ್ ಕೂಡ ಮಾಡಲಾಗಿದೆ ಎಂದಿದ್ದಾರೆ. ಆಗ ಡಿಹೆಚ್‌ಒ, ಡಿಸಿಯವ್ರ ಹತ್ತಿರ ಮಾತನಾಡುತ್ತೇನೆ ಎಂದಿದ್ದಾರೆ.
ಅವ್ಯವಸ್ಥೆ ಕುರಿತು ಜನರಿಗೆಲ್ಲಾ ಗೊತ್ತಾಗಿ, ನೀವ್ ಏನ್ ಮಾಡ್ತಾ ಇದೀರಿ ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಯೊಂದನ್ನೂ ಕೂಡ ಡಿಸಿಯವ್ರ ಮೇಲೆ ಹಾಕಬಾರದು. ನೀವು ಕೂಡ ನೋಡಿಕೊಳ್ಳಬೇಕಲ್ವ ಎಂದು ಕಿವಿಮಾತು ಹೇಳಿದ್ದಾರೆ.
ಕ್ವಾರಂಟೈನ್‌ಗಳಲ್ಲಿ ಸೂಕ್ತ ವ್ಯವಸ್ಥೆಯಿಲ್ಲ. ಊಟ, ಉಪಾಹಾರ ಸೇರಿದಂತೆ ವಿವಿಧ ಸೌಕರ್ಯಗಳು ಸಮರ್ಪಕವಾಗಿಲ್ಲ. ಸ್ವಚ್ಛತೆ ಮಾಡಲಾಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದಂತೆಯೇ ವಿಜಯಪುರ ಡಿಹೆಚ್‌ಒ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಯಾವುದೇ ರೀತಿಯ ದೂರುಗಳು ಬರದಂತೆ ವ್ಯವಸ್ಥೆ ಸರಿಪಡಿಸಬೇಕು ಎಂದು ಸೂಚಿಸಿದ್ದಾರೆ.
ವಾಸ್ತವವಾಗಿ ಅಲ್ಲೇನಾಗಿದೆ ಎಂಬ ಬಗ್ಗೆ ವರದಿ ನೀಡಿ ಎಂದು ವಿಜಯಪುರ ಡಿಹೆಚ್‌ಒಗೆ ಸೂಚನೆ ನೀಡಿದ ಸಚಿವ ಶ್ರೀರಾಮುಲು, ಬಳಿಕ ಮಂಡ್ಯ ಡಿಹೆಚ್‌ಒ ಜೊತೆ ಮಾತನಾಡಿ ಕ್ವಾರಂಟೈನ್ ಕೇಂದ್ರದಿಂದ ಯಾವುದೇ ದೂರುಗಳು ಬರದಂತೆ ಸರಿಯಾಗಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದ್ದಾರೆ.