ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ಹೊರವಲಯದಲ್ಲಿನ ಶಿವಪುರ ಕುಡಿಯುವ ನೀರಿನ ಕೆರೆಯ ಅರ್ಧಭಾಗ ಬತ್ತಿ ಹೋಗಿದೆ. ನಾನಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೂರಿದೆ.ತಾಲೂಕಿನ ಶಿವಪುರ, ಯರಗುಡಿ, ಸಿರವಾರ, ಕಪ್ಪಗಲ್ಲು ಹಾಗೂ ಸಂಗನಕಲ್ಲು ಗ್ರಾಮಗಳೂ ಸೇರಿದಂತೆ ಬಳ್ಳಾರಿಯ ಗಾಂಧಿನಗರದ ವಾಟರ್ ಬೂಸ್ಟರ್ ಗೆ ಶಿವಪುರ ಕುಡಿಯುವ ನೀರಿನ ಕೆರೆಯಿಂದ ಹರಿಬಿಡಲಾಗುತ್ತಿತ್ತು. ಆದರೀಗ ಕೆರೆಯ ನೀರೆತ್ತುವ ಪಂಪ್ ಗಳು ಕಳೆದೊಂದು ತಿಂಗಳಿಂದಲೂ ಪಂಪಿಂಗ್ ಕಾರ್ಯ ನಡೆಸದೇ ಸಂಪೂರ್ಣ ಸ್ತಬ್ಧಗೊಂಡಿವೆ.
ಸದ್ಯ ಈ ಕೆರೆಯು ಡೆಡ್ ಸ್ಟೋರೇಜ್ ಗೆ ಬಂದು ನಿಂತಿದೆ. ಕಳೆದೊಂದು ತಿಂಗಳಿಂದಲೂ ಕುಡಿಯುವ ನೀರಿನ ಪೂರೈಕೆ ಯಲ್ಲಿ ಭಾರೀ ಪ್ರಮಾಣದ ವ್ಯತ್ಯಯ ಉಂಟಾಗಿದೆ. ಕೆರೆಯ ಹಿಂಭಾಗದ ಬಹುಪಾಲು ಭಾಗ ನೀರಿಲ್ಲದೇ ಬರಡಾಗಿದೆ. ಈ ಕೆರೆಯಲ್ಲಿ ಜೀವಿಸುತ್ತಿದ್ದ ಜಲಾಚರಗಳು ಸಾವನ್ನಪ್ಪಿವೆ. ಕೆಲ ಜೀವಿಗಳು ಕೆರೆಯ ದಡದಲ್ಲಿ ನಿಂತಿರುವ ನೀರಿಗೆ ವಲಸೆ ಬಂದಿವೆ.
ಜೂನ್ ತಿಂಗಳಲ್ಲಿ ಎರಡು ಅಥವಾ ಮೂರು ದಿನಕ್ಕೊಮ್ಮೆಈ ಕೆರೆಯಿಂದ ನೀರನ್ನು ಪಂಪಿಂಗ್ ಮಾಡಿ, ತಾಲೂಕಿನ ನಾನಾ ಗ್ರಾಮಗಳಿಗೆ ಪೂರೈಕೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಮೂರು ದಿನಕ್ಕೊಮ್ಮೆಯಾದ್ರೂ ಪಂಪಿಂಗ್ ಮಾಡಲಾಗಿತ್ತು. ಕಳೆದೊಂದು ವಾರದಲ್ಲಿ ಈ ಕೆರೆಯ ನೀರಿನ ಪಂಪಿಂಗ್ ಮಾಡೋದು ಸ್ಥಗಿತಗೊಂಡಿದೆ.