ಬಳ್ಳಾರಿ:ರಾಜ್ಯದಲ್ಲಿ ಜೆಡಿಎಸ್ ಸೇರಿದಂತೆ ಯಾವುದೇ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡರೂ ಭಾರತೀಯ ಜನತಾ ಪಕ್ಷದ ಮೇಲೆ ಪರಿಣಾಮ ಬೀರಲಾಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಹೇಳಿದರು. ಈ ಮೂಲಕ ಪರೋಕ್ಷವಾಗಿ ಸ್ನೇಹಿತರಾದ ಜನಾರ್ದನ ರೆಡ್ಡಿಯವರ ಹೊಸ ಪಕ್ಷದ ಪ್ರಭಾವ ಉಂಟಾಗುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಬಳ್ಳಾರಿ ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಸಚಿವರು, ಶ್ರೀರಾಮುಲು ಮುಖ ನೋಡಿ, ಮತ್ತೊಬ್ಬರ ಮುಖ ನೋಡಿ ಮತ ಹಾಕಬೇಡಿ. ಮೈಸೂರು ಭಾಗ ಅಷ್ಟೇ ಅಲ್ಲಾ, ಕಲ್ಯಾಣ ಕರ್ನಾಟಕದ ಎಲ್ಲ ಭಾಗದಲ್ಲಿ ಬಿಜೆಪಿ ಗೆಲ್ಲಲಿದೆ. ಯಾವುದೇ ಪ್ರಾದೇಶಿಕ ಪಕ್ಷವೂ ಪರಿಣಾಮ ಬೀರುವ ಮಾತೇ ಇಲ್ಲ. ಸ್ವಂತ ಬಲದಿಂದ ನಾವು 150 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಪ್ರಭಾವ ಬೀರುವುದಿಲ್ಲ. ಬಳ್ಳಾರಿ, ವಿಜಯನಗರ ಅವಳಿ ಜಿಲ್ಲೆಯ ಮೂರು ಸಾಮಾನ್ಯ ಕ್ಷೇತ್ರದಲ್ಲಿ ಆನಂದ್ ಸಿಂಗ್, ಕರುಣಾಕರ್ ರೆಡ್ಡಿ ಹಾಗೂ ಸೋಮಶೇಖರ್ ರೆಡ್ಡಿ ಗೆಲ್ಲುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಪಕ್ಷ ಕಟ್ಟಬಹುದು. ಚುನಾವಣೆಯಲ್ಲೂ ಸ್ಪರ್ಧಿಸಬಹುದು. ಆದರೆ ಜನರ ಒಲವು ಬಿಜೆಪಿ ಮೇಲೆ ಇದೆ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ:ಸಿಎಂ ನಾನು ಆಗೋದಲ್ಲ, ಅದು ಹೈಕಮಾಂಡ್ ಪ್ರಸಾದ: ಡಿಕೆಶಿ ಸ್ಪಷ್ಟ ನುಡಿ
ದೇಶದ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಚುನಾವಣೆಯು ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಲಿದೆ. ಪ್ರಾದೇಶಿಕ ಪಕ್ಷಗಳು ರಚನೆ ಆಗಿರುವುದರಿಂದ ನಮ್ಮ ಪಾರ್ಟಿಯ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಶ್ರೀರಾಮುಲು, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಜನರಿಗೆ ಟೋಪಿ ಹಾಕುವ ಕೆಲಸ ಮಾಡಿದೆ. ಕಾಂಗ್ರೆಸ್ ನಾಯಕರು ಇಷ್ಟು ವರ್ಷ ಅಧಿಕಾರದಲ್ಲಿದ್ದಾಗ ಯಾರಿಗೆ ಮೀಸಲಾತಿ ನೀಡಿದ್ದಾರೆ? ಮೀಸಲಾತಿ ವಿಚಾರದಲ್ಲಿ ಯಾರಿಗೂ ನ್ಯಾಯ ಒದಗಿಸಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಚಿವ ಶ್ರೀರಾಮುಲು ಟೀಕಿಸಿದರು.
ಮೀಸಲಾತಿ ಬೇಡಿಕೆ ಮೊದಲಿನಿಂದಲೂ ಇತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬೇಡಿಕೆಗೆ ಸ್ಪಂದಿಸುವ ಕಾರ್ಯವನ್ನು ಮಾಡಿದ್ದಾರೆ. ಈ ಬಗ್ಗೆ ಚರ್ಚೆಯನ್ನೂ ಕೂಡ ಮುಂದುವರೆಸಿದ್ದಾರೆ. ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ಮೀಸಲಾತಿ ಜಾರಿಗೆ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಸಫಲರಾಗುವಂತಹ ಕಾರ್ಯವನ್ನೂ ಮಾಡಲಾಗುತ್ತಿದೆ. ಸಂವಿಧಾನಕ್ಕೆ ಅನುಗುಣವಾಗಿ ಆಯಾ ಜನಸಂಖ್ಯೆಯ ಆಧಾರದ ಮೇಲೆ ಇರುವ ಬೇಡಿಕೆಗಳನ್ನು ಈಡೇರಿಸುವ ಕಾರ್ಯವನ್ನು ಬಿಜೆಪಿ ಮಾಡಲಿದೆ ಎಂದು ಹೇಳಿದರು.
ಬಿಜೆಪಿ ವಿಜಯ ಅಭಿಯಾನ:ಇಂದಿನಿಂದ ಭಾರತೀಯ ಜನತಾ ಪಕ್ಷದಿಂದ ವಿಜಯ ಅಭಿಯಾನ ಆರಂಭಿಸಲಾಗಿದೆ. ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇರೆಗೆ ಬೂತ್ ಮಟ್ಟದಿಂದಲೂ ಈ ಅಭಿಯಾನ ನಡೆಯಲಿದೆ. ಇದರ ಮೂಲಕ ಪಕ್ಷದ ಕಾರ್ಯಕರ್ತರ ಮನೆಗಳ ಮೇಲೆ ಪಕ್ಷದ ಬಾವುಟ ಹಾರಿಸುವ ಕಾರ್ಯ ನಡೆಯಲಿದೆ. ಬಿಜೆಪಿಯು ಆರಂಭದಲ್ಲಿ ಕೇವಲ 3 ಸ್ಥಾನಗಳಿಂದ ಇಂದು 100ಕ್ಕೂ ಹೆಚ್ಚು ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಇನ್ನೊಂದೆಡೆ ಹಿಂದೊಮ್ಮೆ 415 ಮಂದಿ ಸಂಸದರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷವು, ಈಗ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲಾಗದ ಸ್ಥಿತಿಗೆ ತಲುಪಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಇದನ್ನೂ ಓದಿ:ಹೊಸ ಪಕ್ಷದ ಬಾವುಟ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ