ವಿಜಯನಗರ: ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಪ್ರತಿಭಟನೆ ವಿಜಯನಗರ:ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನವನ್ನು ಖಂಡಿಸಿ ಸಹಮತ ವೇದಿಕೆ ಹಾಗೂ ಚಂದ್ರಬಾಬು ನಾಯ್ಡು ಅಭಿಮಾನಿ ಬಳಗದ ನೂರಾರು ಕಾರ್ಯಕರ್ತರು ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಹಗರಿಬೊಮ್ಮನಹಳ್ಳಿಯ ಈಶ್ವರ ದೇವಸ್ಥಾನದಿಂದ ನೂರಾರು ಕಾರ್ಯಕರ್ತರು ಬಿಎಸ್ಎನ್ಎಲ್ ಕಚೇರಿ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಚಂದ್ರಬಾಬು ನಾಯ್ಡು ಅವರ ಪರವಾಗಿ ಬೃಹತ್ ಮೆರವಣಿಗೆ ಮಾಡಿದರು. ನಾನು ಚಂದ್ರಬಾಬು ನಾಯ್ಡು (ಸಿಬಿಎನ್) ಜೊತೆ ಇದ್ದೇನೆ ಎಂಬ ಶೀರ್ಷಿಕೆಯ ಫಲಕಗಳನ್ನು ಹಿಡಿದುಕೊಂಡಿದ್ದ ಮಹಿಳೆಯರು ಸೇರಿ ನೂರಾರು ಜನ ಅವರ ಬಂಧನ ಅಕ್ರಮವಾಗಿದೆ ಎಂದು ಆರೋಪಿಸಿ ಆಂಧ್ರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ರೈತ ಮುಖಂಡ ಯಶವಂತ್ ಮಾತನಾಡಿ, ಚಂದ್ರಬಾಬು ನಾಯ್ಡು ಅವರು ಕೇವಲ ಆಂಧ್ರ ಪ್ರದೇಶಕ್ಕೆ ಮಾತ್ರ ನಾಯಕರಲ್ಲ. ಅವರು ರಾಷ್ಟ್ರನಾಯಕರು. ಅವರನ್ನು ಅಕ್ರಮವಾಗಿ ಬಂಧನ ಮಾಡಿದ್ದಕ್ಕೆ ಪ್ರಾಂತ್ಯಾತೀತವಾಗಿ, ಧರ್ಮಾತೀತರಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಹೋರಾಟ ಇನ್ನಷ್ಟು ತೀವ್ರವಾಗಲಿ:ರಾಷ್ಟ್ರೀಯ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದರೂ, ಇನ್ನೂ ಆಂಧ್ರದಲ್ಲಿ ಜನ ಟಿವಿ ನೋಡುತ್ತಾ ಮನೆಯಲ್ಲಿದ್ದಾರೆ ಹೊರತು, ಹೊರಗೆ ಬರುತ್ತಿಲ್ಲ. ಆದ್ದರಿಂದ ಜನ ನಾಯಕನಿಗಾಗಿ ಜನರು ಹೊರಗೆ ಬಂದು ಹೋರಾಟ ಮಾಡಬೇಕಿದೆ ಎಂದು ಸುಬ್ಬರಾವ್ ಆಂಧ್ರ ಜನರಿಗೆ ಕರೆ ನೀಡಿದರು.
ತುಮಕೂರು ಜಿಲ್ಲೆಯಲ್ಲಿಯೂ ಪ್ರತಿಭಟನೆ:ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೇಲೆ ಹಗರಣದ ಆರೋಪ ಹೊರಿಸಿ ಬಂಧಿಸಿರುವ ಅಲ್ಲಿನ ಸರ್ಕಾರದ ಕ್ರಮ ವಿರೋಧಿಸಿ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿಯೂ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.
ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಯಲ್ಲಿ ಚಂದ್ರ ಬಾಬುನಾಯ್ಡು ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಇತ್ತೀಚಿಗೆ ಆಂಧ್ರ ಪೊಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಂದಮೂರಿ ಬಾಲಕೃಷ್ಣ ಅಭಿಮಾನಿ ಬಳಗ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿ ಬಳಗ, ನಾರಾ ಚಂದ್ರಬಾಬು ನಾಯ್ಡು ಅಭಿಮಾನಿ ಬಳಗದ ವತಿಯಿಂದ ಪಾವಗಡ ಪಟ್ಟಣದ ನಿರೀಕ್ಷಣ ಮಂದಿರದಿಂದ ಶನಿಮಹಾತ್ಮ ಸರ್ಕಲ್ ವರೆಗೂ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಡಾ. ವೆಂಕಟರಾಮಯ್ಯ, ಆಂಧ್ರಪ್ರದೇಶ ಕಲ್ಯಾಣದುರ್ಗಂ ಟಿಡಿಪಿ ಉಸ್ತುವಾರಿ ಉಮಾ ಮಹೇಶ್ವರ್, ಪಾವಗಡ ತಾಲೂಕಿನ ಹಿರಿಯ ಮುಖಂಡರಾದ ಮಾನಂ ವೆಂಕಟಸ್ವಾಮಿ, ಹಿಂದೂಪುರ ಟಿಡಿಪಿ ಜಿಲ್ಲಾಧ್ಯಕ್ಷೆ ಸುಬ್ಬರತ್ನಮ್ಮ, ಶಾಂತಿ ಮೆಡಿಕಲ್ನ ದೇವರಾಜ್, ರೈತ ಮುಖಂಡ ಗಂಗಾಧರ್ ನಾಯ್ಡು, ಪರಿಟಾಲ ವೆಂಕಟೇಶ್, ತರಕಾರಿ ಕೃಷ್ಣಪ್ಪ, ಮಾನಂ ಶಶಿಕಿರಣ್, ತಿರುಮಣಿ ಸುರೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ : ವಿಡಿಯೋ