ವಿಜಯನಗರ: ಐತಿಹಾಸಿಕ ತಾಣ ಹಂಪಿಯಲ್ಲಿ ಜುಲೈ ತಿಂಗಳಲ್ಲಿ ಆಯೋಜಿಸಿರುವ ಜಿ-20 ಶೃಂಗಸಭೆಗೆ ದೇಶ- ವಿದೇಶಗಳಿಂದ ಗಣ್ಯಾತಿಗಣ್ಯರು ಆಗಮಿಸುವುದರಿಂದ ಹೊಸಪೇಟೆ ತಾಲೂಕಿನ ಕಮಲಾಪುರ ಮತ್ತು ಹಂಪಿ ಭಾಗದಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಇತರೆ ಕಾರ್ಯಗಳು ಚುರುಕುಗೊಂಡಿವೆ. ಜಿ20 ಸಮ್ಮಿಟ್ ಭಾಗವಾಗಿ ತಾಲೂಕಿನ ಕಮಲಾಪುರ ಪಟ್ಟಣದ ಅಂಬೇಡ್ಕರ್ ವೃತ್ತದ ಸುತ್ತಮುತ್ತ ಹಾಗೂ ಕಂಪ್ಲಿ- ಹೊಸಪೇಟೆ ಮಾರ್ಗದ ಸಾರ್ವಜನಿಕ ರಸ್ತೆ ಮತ್ತು ಚರಂಡಿಗಳ ಮೇಲೆ ನಿರ್ಮಿಸಿದ್ದ ಕಟ್ಟಡಗಳ ಮೆಟ್ಟಿಲು, ಕಟ್ಟೆ ಹಾಗೂ ಗೋಡೆಗಳನ್ನು ಜೆಸಿಬಿಗಳ ನೆರವಿನಿಂದ ಪುರಸಭೆ ಅಧಿಕಾರಿಗಳು ತೆರವುಗೊಸಿದರು.
ಅದರೊಂದಿಗೆ ಮುಖ್ಯ ರಸ್ಥೆಯಲ್ಲಿ ಬೇಕಾಬಿಟ್ಟಿಯಾಗಿ ಸುರಿದಿದ್ದ ಕಟ್ಟಡಗಳ ತ್ಯಾಜ್ಯ ಮಣ್ಣನ್ನು ಊರ ಹೊರಗೆ ಸಾಗಿಸಿದರು. ಕಡ್ಡಿರಾಂಪುರದಿಂದ ಹಂಪಿ ಮತ್ತು ಹಂಪಿಯಿಂದ ಕಮಲಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಕ್ಕಪಕ್ಕದಲ್ಲಿ ಬೆಳೆದಿರುವ ಬೃಹತ್ ಮರಗಳಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಸಮಸ್ಯಾತ್ಮಕ ಗಿಡಗಳನ್ನು ಗುರುತಿಸಿದ್ದ ವಲಯ ಅರಣ್ಯ ಅಧಿಕಾರಿಗಳು, ಮುನ್ನೆಚ್ಚರಿಕೆ ಕ್ರಮವಾಗಿ ಕಡಿದು ಹಾಕಿದ್ದಾರೆ. ಈ ಮೂಲಕ ವಾಹನಗಳ ಸಂಚಾರಕ್ಕೆ ಆಗಬಹುದಾದ ತೊಂದರೆಯನ್ನು ತಪ್ಪಿಸಿದ್ದಾರೆ.
ಕಟ್ಟಡ ತೆರವು:ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ರಸ್ತೆ ಬದಿಗಳಲ್ಲಿ ಚರಂಡಿ ಅತಿಕ್ರಮಣ ಮಾಡಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಹಂಪಿಯಲ್ಲಿ ಜಿ20 ರಾಷ್ಟ್ರಗಳ ಶೃಂಗಸಭೆ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯದ ಹೊಣೆ ಹೊತ್ತಿರುವ ಕಮಲಾಪುರ ಪುರಸಭೆ ತನ್ನ ಕೆಲಸವನ್ನು ಕಳೆದ ತಿಂಗಳಿನಿಂದಲೇ ಆರಂಭಿಸಿದ್ದು, ಇದೀಗ ಮತ್ತಷ್ಟು ಚುರುಕುಗೊಳಿಸಿದೆ. ಇದರ ಭಾಗವಾಗಿ ಚರಂಡಿಗಳ ಮೇಲೆ ನಿರ್ಮಿಸಿದ್ದ ಅಂಗಡಿಗಳು ಸೇರಿ ಹಲವಾರು ಕಟ್ಟಡಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು.
ಪೊಲೀಸ್ ಸಿಬ್ಬಂದಿ ಜತೆಗಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕಮಲಾಪುರ ಪಟ್ಟಣದ ಮುಖ್ಯರಸ್ತೆಯಿಂದ ಹಂಪಿವರೆಗೆ ಪುರಸಭೆಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಚರಂಡಿಯಲ್ಲಿ ತುಂಬಿರುವ ಹೂಳು ತೆಗೆಯಲು ಸಾಧ್ಯವಾಗದ್ದರಿಂದ ಚರಂಡಿಯನ್ನು ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾಗೇಶ್ ಹೇಳಿದರು.