ಬಳ್ಳಾರಿ:ಮಕ್ಕಳಿಲ್ಲ ಎಂಬ ಕೊರಗು ಹೊಂದಿರುವ ದಂಪತಿಗೆ ಗಡಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆ ಕೊರತೆ ನೀಗಿಸುವ ಕಾರ್ಯ ಮಾಡುತ್ತಿದೆ. ಮಕ್ಕಳಿಲ್ಲದ ದಂಪತಿ ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದೆ ಬರುತ್ತಿದ್ದು, ಇಲ್ಲಿನ ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿಗಳೂ ನವಜಾತ ಶಿಶಿುಗಳನ್ನು ದತ್ತು ಪಡೆದುಕೊಂಡಿದ್ದಾರೆ.
2012ರಿಂದ ಈವರೆಗೆ ಅಂದಾಜು 33 ಶಿಶುಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಕ್ಷಣೆ ಮಾಡಿದ್ದು, ಈ ಪೈಕಿ 6-7 ಶಿಶುಗಳನ್ನು ವಿದೇಶದಲ್ಲಿರುವ ದಂಪತಿ ದತ್ತು ಪಡೆದಿದ್ದಾರೆ.
ವಿದೇಶಿ ದಂಪತಿಗಳ ಕೈಸೇರುತ್ತಿವೆ ಅನಾಥ ಮಕ್ಕಳು ಆ ಪೈಕಿ ಕಳೆದ 6 ತಿಂಗಳ ಹಿಂದೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡ್ರಿ ಗ್ರಾಮದ ತೋಟದ ಮನೆಯಲ್ಲಿ ಕೇವಲ 5 ದಿನದ ಶಿಶುವೊಂದನ್ನು ರಕ್ಷಣೆ ಮಾಡಲಾಗಿತ್ತು. ಸದ್ಯ ಮಗು ಈಗ ಚೀನಾದ ಹಾಂಕ್ಕಾಂಗ್ನಲ್ಲಿ ನೆಲೆಸಿರುವ ದಂಪತಿ ಕೈಸೇರಿದೆ. ಈ ದಂಪತಿ ಮೊದಲು ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಇದೀಗ ಹಾಂಕ್ಕಾಂಗ್ನಲ್ಲಿ ವಾಸವಿದ್ದಾರೆ. ಇವರು ಕಾನೂನಾತ್ಮಕವಾಗಿ ದತ್ತು ಪಡೆದು ಮಗುವಿಗೆ ರಕ್ಷಿತಾ ಎಂದು ನಾಮಕರಣ ಮಾಡಿದ್ದಾರೆ.
ಅಲ್ಲದೇ ನೆರೆಯ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಚಿತ್ತಾಪುರ ಗ್ರಾಮದ ಬಳಿ ಎಸೆದು ಹೋಗಿದ್ದ ಮಗುವನ್ನೂ ಸಹ ರಕ್ಷಿಲಾಗಿದೆ. ಈ ಮಗುವಿಗೆ ಮುಳ್ಳು ಚುಚ್ಚಿ ಗಾಯವಾಗಿದ್ದಲ್ಲದೆ, ಜ್ವರದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಮಗು ಗುಣಮುಖವಾಗಿ ಬಿಡುಗಡೆಯಾಗಲಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಯು ನಾಗರಾಜ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಮಗುವಿಗೆ ಇಲಾಖೆಯೇ ಭೂಮಿಕಾ ಎಂದು ನಾಮಕರಣ ಮಾಡಿದೆ ಎಂದಿದ್ದಾರೆ.
ಕಳೆದ 2012ರಿಂದ ಈವರೆಗೂ ಅಂದಾಜು 33 ನವಜಾತ ಶಿಶುಗಳನ್ನು ರಕ್ಷಣೆ ಮಾಡಲಾಗಿದೆ. ಆ ಪೈಕಿ 20 ಹೆಣ್ಣು ಮಗು, 13 ಗಂಡು ಮಗು ರಕ್ಷಿಸಲಾಗಿದೆ. ಮಮತೆಯ ತೊಟ್ಟಿಲು ಯೋಜನೆಯಡಿ ಅವುಗಳ ಯೋಗಕ್ಷೇಮ ನೋಡಿಕೊಳ್ಳಲಾಗುತ್ತಿದೆ ಎಂದು ನಾಗರಾಜ್ ತಿಳಿಸಿದ್ದಾರೆ.