ಹಾವೇರಿ/ವಿಜಯನಗರ: ಉತ್ತರಕರ್ನಾಟಕ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕೋತ್ಸವ ಶುಕ್ರವಾರ ನಡೆಯಿತು. ಎಲ್ಲ ಜಾತ್ರೆಗಳಲ್ಲಿ ರಥಗಳನ್ನು ಎಳೆಯುವ ಮೂಲಕ ಆಚರಿಸಿದರೇ ಇಲ್ಲಿ ಕಾರ್ಣಿಕ ನುಡಿಯುವ ಮೂಲಕ ಆಚರಿಸಲಾಗುತ್ತದೆ.
ಮೈಲಾರದಲ್ಲಿ ಅದ್ಧೂರಿ ಕಾರ್ಣಿಕೋತ್ಸವ ನಡೆಯಿತು ಮೈಲಾರದಲ್ಲಿ ಪ್ರತಿವರ್ಷ ಭರತ ಹುಣ್ಣಿಮೆಯ ನಂತರದ ದಿನಗಳಲ್ಲಿ ಕಾರ್ಣಿಕ ನುಡಿಯಲಾಗುತ್ತದೆ. ಈ ಕಾರ್ಣಿಕವನ್ನ ವರ್ಷದ ಭವಿಷ್ಯವಾಣಿಯಂತಲೇ ನಂಬಲಾಗುತ್ತದೆ. ಪ್ರಸ್ತುತ ವರ್ಷದ ಕಾರ್ಣಿಕೋತ್ಸವ ಶುಕ್ರವಾರ ನಡೆಯಿತು.
9 ದಿನಗಳ ಕಾಲ ಉಪವಾಸ ವೃತ ಆಚರಿಸಿದ ಗೊರವಪ್ಪ ರಾಮಪ್ಪಜ್ಜ 15 ಅಡಿ ಬಿಲ್ಲನೇರಿ ಕಾರ್ಣಿಕ ನುಡಿದರು. ಮಳೆ ಬೆಳೆ ಸಂಪಾಯಿತಲೇ ಪರಾಕ್ ಎಂದು ನುಡಿದು ಮೇಲಿನಿಂದ ಕೆಳಗೆ ಧಮುಕಿದರು. ಕಾರ್ಣಿಕ ನುಡಿಯುತ್ತಿದ್ದಂತೆ ಕಾರ್ಣಿಕ ಕೇಳಲು ಬಂದ ಮುಖಂಡರು ಲಕ್ಷಾಂತರ ಭಕ್ತರು ವಿಶ್ಲೇಷಣೆ ಮಾಡುತ್ತಾರೆ.
ಪ್ರಸ್ತುತ ವರ್ಷ ಮಳೆ ಬೆಳೆ ಸಂಪಾಯಿತಲೇ ಅಂದರೆ ಎಲ್ಲ ಕಡೆ ಸಮೃದ್ಧಿಯಾಗುತ್ತದೆ ಎಂಬ ಸಂತಸವನ್ನ ಮುಖಂಡರು ವ್ಯಕ್ತಪಡಿಸಿದರು. ಶ್ರೀಕ್ಷೇತ್ರ ಮೈಲಾರದ ಡೆಂಕನಮರಡಿಯಲ್ಲಿ ಪ್ರತಿವರ್ಷ ಕಾರ್ಣಿಕೋತ್ಸವ ನಡೆಯುತ್ತೆ.
ಈ ಕಾರ್ಣಿಕ ನುಡಿ ಕೇಳಲು ಲಕ್ಷಾಂತರ ಭಕ್ತರು ಆಗಮಿಸಿರುತ್ತಾರೆ. ಕೊರೊನಾ ಮುಂಜಾಗೃತೆ ಹಿನ್ನೆಲೆಯಲ್ಲಿ ಸಾಕಷ್ಟು ಬಿಗಿಬಂದೋಬಸ್ತ್ ಕೈಗೊಂಡರು. ಸಹ ಲಕ್ಷಾಂತರ ಭಕ್ತರು ಭವಿಷ್ಯವಾಣಿಗೆ ಸಾಕ್ಷಿಯಾದರು.
ಮೈಲಾರಲಿಂಗೇಶ್ವರ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರು ಗೊರವಪ್ಪನಿಗೆ ಈ ಸಮಯದಲ್ಲಿ ದೇವರು ನೀಡುವ ಕಾರ್ಣಿಕವನ್ನ ಕಿವಿಯಲ್ಲಿ ಹೇಳುತ್ತಾರೆ. ಅವರ ಆಶೀರ್ವಾದ ಪಡೆದ ಗೊರವಪ್ಪ ರಾಮಪ್ಪಜ್ಜ ಬಿಲ್ಲನೇರಿ ಕಾರ್ಣಿಕ ನುಡಿಯುತ್ತಾನೆ. ಗೊರವಪ್ಪ ಬೀಳುವ ದಿಕ್ಕು ಸೇರಿದಂತೆ ರಾಜಕೀಯ ವಿಶ್ಲೇಷಣೆಯನ್ನ ಸಹ ಮಾಡಲಾಗುತ್ತದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಮೈಲಾರಲಿಂಗೇಶ್ವರ ದೇವಸ್ಥಾನದ ವಿಶಿಷ್ಟವಾಗಿ ಅಲಂಕಾರ ಮಾಡಲಾಗಿತ್ತು. ಮೈಲಾರಲಿಂಗ ಮತ್ತು ಗಂಗಮಾಳವ್ವ ದೇವಿ ಸೇರಿದಂತೆ ವಿವಿಧ ದೇವರ ಮೂರ್ತಿಗಳಿಗೆ ವಿಶಿಷ್ಟ ಅಲಂಕಾರ ಮಾಡಿ ಹಲವು ಪೂಜಾ ಕೈಂಕರ್ಯಗಳನ್ನ ನಡೆಸಲಾಯಿತು. ಗೊರವಯ್ಯರು ಬಾರಕೋಲ್ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನ ಸಲ್ಲಿಸಿದರು.
ಡಮರುಗ ಬಾರಿಸುವ ಮೂಲಕ ಮೈಲಾರಲಿಂಗೇಶ್ವರನಿಗೆ ಜಯಕಾರ ಹಾಕಿದರು. ಏಳುಕೋಟಿ ಏಳುಕೋಟಿ ಚೆಂಗಮಲೋ ಚೆಂಗಮಲೋ ಜಯಕಾರ ಡೆಂಕನಮರಡಿ ಸೇರಿದಂತೆ ಮೈಲಾರದಲ್ಲಿ ಕೇಳಿಬಂತು. ಕಾರ್ಣಿಕೋತ್ಸವದಲ್ಲಿ ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿಶ್ರೀಗಳು ಮಾಜಿ ಸಚಿವರಾದ ಬಸವರಾಜ್ ಶಿವಣ್ಣನವರ್, ಪರಮೇಶ್ವರನಾಯಕ ಪಾಲ್ಗೊಂಡಿದ್ದರು.
ಇದನ್ನು ಓದಿ:ಬೊಮ್ಮಾಯಿ ಅಧಿಕಾರವಧಿ ಬಗ್ಗೆ ಭವಿಷ್ಯ ನುಡಿದ ಮೈಲಾರ ಧರ್ಮದರ್ಶಿಗೆ ಸಂಕಷ್ಟ