ಬಳ್ಳಾರಿ: ಈಗಲ್ಟನ್ ರೆಸಾರ್ಟ್ನಲ್ಲಿ ತಂಗಿದ್ದ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಜೈಲು ಸೇರಿದ್ದ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಇಂದು ತಮ್ಮ ತವರೂರಾದ ಹೊಸಪೇಟೆಗೆ ಆಗಮಿಸಿದರು.
ನಗರದಲ್ಲಿರುವ ತಮ್ಮ ನಿವಾಸಕ್ಕೆ ಅವರು ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳು, ಕಾರ್ಯಕರ್ತರು ಹೂವಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದರು. ಎರಡು ದಿನಗಳ ಹಿಂದೆಯಷ್ಟೇ ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, ಅನಾರೋಗ್ಯದ ನಿಮಿತ್ತ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಣೇಶ್ ನಿನ್ನೆ ತಾನೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆಸ್ಪತ್ರೆಯಿಂದ ನೇರವಾಗಿ ಹೊಸಪೇಟೆಗೆ ಆಗಮಿಸಿದರು. ಕಳೆದ 3 ತಿಂಗಳಿನಿಂದ ಸ್ವಕ್ಷೇತ್ರದಿಂದ ದೂರ ಉಳಿದಿದ್ದ ಅವರು ಇದೀಗ ಸ್ವಕ್ಷೇತ್ರಕ್ಕೆ ಕಾಲಿಸಿರುವುದು ಕಾರ್ಯಕರ್ತರಲ್ಲಿ ಸಂತಸ ತಂದಿದೆ.
ನಾನು ಆನಂದ್ ಸಿಂಗ್ ಅವರ ತಮ್ಮ:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಆನಂದ್ ಸಿಂಗ್ ಅವರು ಈಗಲೂ ನನ್ನ ಸಹೋದರನೇ. ದಶಕದಿಂದಲೂ ನಾನು ಅನುಭವಿಸಿದ ಕಷ್ಟ, ಕಾರ್ಪಣ್ಯಗಳ ಬಗ್ಗೆ ಅವರಿಗೆ ತಿಳಿದಿದೆ. ನಾನು ಏನೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅವರು ಈಗಲೂ ನನ್ನ ಬೆನ್ನ ಹಿಂದೆ ಇದ್ದಾರೆ. ಅವರು ಬೇಡವೆಂದರೂ ನಾನು ಅವರಿಗೆ ತಮ್ಮನಾಗಿಯೇ ಇರುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುವ ವಿಶ್ವಾಸವಿದೆ ಎಂದರು.
ಸ್ವಕ್ಷೇತ್ರಕ್ಕೆ ಆಗಮಿಸಿದ ಕಂಪ್ಲಿ ಶಾಸಕ ಜೆಎನ್ ಗಣೇಶ್ಗೆ ಅದ್ಧೂರಿಯಾಗಿ ಸ್ವಾಗತ ಕೋರಿದ ಕಾರ್ಯಕರ್ತರು ಕಳೆದ ಮೂರು ತಿಂಗಳ ಕಾಲ ನಾನು ಕ್ಷೇತ್ರದಲ್ಲಿರಲಿಲ್ಲ. ಆ ಅವಧಿಯಲ್ಲಿ ಏನೆಲ್ಲಾ ಘಟನೆಗಳು ನಡೆದಿವೆ ಎಂಬುದು ನನಗೆ ಗೊತ್ತಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಇಲ್ಲದಿರುವುದಕ್ಕೆ ಬಹಳ ನೋವಿದೆ. ಸಣ್ಣದಾಗಿದ್ದ ಈ ಘಟನೆ ದೊಡ್ಡದಾಗಿದ್ದೇ ಅಚ್ಚರಿ. ನನ್ನ ತಪ್ಪನ್ನು ನಾನು ತಿದ್ದಿಕೊಳ್ಳುತ್ತೇನೆ. ರೆಸಾರ್ಟ್ನಲ್ಲಿ ನಡೆದ ಘಟನೆ ಕುರಿತು ಹೆಚ್ಚಾಗಿ ಏನೂ ಹೇಳುವುದಿಲ್ಲ ಎನ್ನುವ ಮೂಲಕ ಸುದ್ದಿಗಾರರ ಹತ್ತು ಹಲವು ಯಕ್ಷ ಪ್ರಶ್ನೆಗಳಿಗೆ ಒಂದೇ ಉತ್ತರ ಕೊಟ್ಟರು.
ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವುದಿಲ್ಲ:
ಶಾಸಕ ರಮೇಶ್ ಜಾರಕಿಹೊಳಿ ಅವರು ನಮ್ಮ ಸಮುದಾಯದ ಮುಖಂಡರು. ಅವರು ರಾಜೀನಾಮೆ ಕೊಡುವುದಿಲ್ಲ. ಆ ರೀತಿ ಆಗಲು ಸಾಧ್ಯವೇ ಇಲ್ಲ. 5 ವರ್ಷ ಈ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಸರ್ಕಾರ ಸುಭದ್ರವಾಗಿರುತ್ತದೆ. ಕಾಂಗ್ರೆಸ್ ಪಕ್ಷ ನನ್ನ ಅಮಾನತು ಆದೇಶವನ್ನು ವಾಪಾಸ್ ಪಡೆಯುತ್ತದೆ ಎಂಬ ವಿಶ್ವಾಸವಿದೆ. ಎಂಥೆಂತವರೋ ಏನೇನೋ ಮಾಡಿದ್ದಾರೆ. ನಾನು ಮಾಡಿದ್ದೊಂದು ಸಣ್ಣ ತಪ್ಪು. ಆದರೆ, ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.