ಬಳ್ಳಾರಿ:ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಚುನಾವಣೆ ತಡೆಗೆ ಬಿಜೆಪಿಯ ಮುಖಂಡರು ಶತ ಪ್ರಯತ್ನ ನಡೆಸಿದ್ದರು. ಇಲ್ಲಿ ದಾಂಧಲೆ ಸೃಷ್ಟಿಸೋ ಸಲುವಾಗಿ ನೆರೆಯ ಆಂಧ್ರ ಪ್ರದೇಶದಿಂದ ಬಾಡಿಗೆ ಗೂಂಡಾಗಳನ್ನು ಕರೆ ತಂದಿದ್ದಾರೆಂದು ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ ದೂರಿದ್ದಾರೆ.
ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಭೀಮಾನಾಯ್ಕ ತೋಳು ತಟ್ಟಿದ ಶಾಸಕರ ದುಂಡಾವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಭೀಮಾನಾಯ್ಕ ಅವರು, ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟಬಹುಮತ ಇತ್ತಾದ್ರೂ ಅದನ್ನ ಹೇಗಾದ್ರೂ ಮಾಡಿ ತಡೆಯೊಡ್ಡುವ ಸಲುವಾಗಿಯೇ ನೆರೆಯ ಆಂಧ್ರಪ್ರದೇಶದಿಂದ ಬಾಡಿಗೆ ಗೂಂಡಾಗಳಿಗೆ ದೂರವಾಣಿ ಕರೆಮಾಡಿ ಇಲ್ಲಿ ದಾಂಧಲೆ ಸೃಷ್ಟಿಸಲು ಕಾರಣೀಭೂತರಾಗಿರುವ ಆ ವ್ಯಕ್ತಿಯ ಕಾಲ್ ಡಿಟೇಲ್ಸ್ ತೆಗೆಸಬೇಕು. ಅದರ ಸಂಪೂರ್ಣ ತನಿಖೆಗೆ ಜಿಲ್ಲಾ ಪೊಲೀಸ್ ಇಲಾಖೆಯು ಮುಂದಾಗಬೇಕೆಂದು ನೇರವಾಗಿ ಮಾಜಿ ಶಾಸಕ ಕೆ.ನೇಮರಾಜ ನಾಯ್ಕ ವಿರುದ್ಧ ಹರಿಹಾಯ್ದಿದಿದ್ದಾರೆ.
ಅಲ್ಲದೇ, ಮಾಜಿ ಶಾಸಕ ನೇಮರಾಜ ನಾಯ್ಕ ಅವರ ಅನ್ಯಾಯ, ಅನಾಚಾರಗಳು ಹೆಚ್ಚಾಗಿ ಬಿಟ್ಟಿವೆ. ನಮಗೆ ಸ್ಪಷ್ಟ ಬಹುಮತ ಇತ್ತು. ನಮ್ಮ ಪಕ್ಷದ 11 ಮಂದಿ ಸದಸ್ಯರು ಇದ್ದರು. ನನ್ನದೊಂದು ಮತ ಸೇರಿ 12 ಮತಗಳಿದ್ದವು. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರೋದನ್ನ ತಪ್ಪಿಸೋ ಸಲುವಾಗಿ ಈ ರೀತಿಯ ದುಂಡಾವರ್ತನೆಯನ್ನ ಬಿಜೆಪಿಯವ್ರೇ ಸೃಷ್ಟಿ ಮಾಡಿದ್ದಾರೆ. ಅವರೇ ಬ್ಯಾರಿಕೇಡ್ ತಳ್ಳಿದ್ರು. ಅವರೇ ಬ್ಯಾರಿಕೇಡ್ಗಳನ್ನು ನೂಕಿದ್ರು. ನಮ್ಮ ಪಕ್ಷದ ಮುಖಂಡರನ್ನು ಹಾಗೂ ವೈಯಕ್ತಿಕವಾಗಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಶಾಸಕ ಭೀಮಾನಾಯ್ಕ ದೂರಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರೋದರಿಂದ ಅಧಿಕಾರದ ದರ್ಪದಿಂದ ಮಾಜಿ ಶಾಸಕ ನೇಮರಾಜ ನಾಯ್ಕ ಈ ರೀತಿಯ ವರ್ತನೆಯನ್ನ ಮಾಡಿದ್ದಾರೆ. ಅಲ್ಲಿ ಅನಗತ್ಯವಾಗಿ ಗಲಭೆ ಸೃಷ್ಟಿ ಮಾಡಿದ್ದು ನಾವಲ್ಲ. ಅವರೇ ಈ ಗಲಭೆ ಸೃಷ್ಠಿಸಿದ್ದರು. ಅವಾಚ್ಯ ಶಬ್ದಗಳಿಂದ ನಮ್ಮನ್ನ ನಿಂದಿಸಿದ್ದರಿಂದಲೇ ಅನಿವಾರ್ಯ ಕಾರಣಗಳಿಂದ ನಾವು ಕೂಡ ರೊಚ್ಚಿಗೇಳಬೇಕಾಯಿತು. ಹೀಗಾಗಿ, ಬಿಜೆಪಿಯವ್ರು ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಗುಂಡಾಗಿರಿಯ ವಾತಾವರಣವನ್ನ ನಿರ್ಮಾಣ ಮಾಡಲು ಹೊರಟಿದ್ದಾರೆ. ಹಗರಿಬೊಮ್ಮನಹಳ್ಳಿ ಜನರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾಲಕ್ರಮೇಣ ಅವರಿಗೆ ಸೂಕ್ತ ಉತ್ತರ ನೀಡಲಿದ್ದಾರೆಂದು ಶಾಸಕ ಭೀಮಾನಾಯ್ಕ ಸ್ಪಷ್ಟಪಡಿಸಿದ್ದಾರೆ.