ಹೊಸಪೇಟೆ (ವಿಜಯನಗರ): ನೂತನ ಸಂಪುಟದಲ್ಲಿ ನೀಡಿರುವ ಖಾತೆಯ ಬಗ್ಗೆ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್, ಸದ್ಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದಾರೆ.
ಇಂದು ಕುಟುಂಬ ಸಮೇತರಾಗಿ ನಗರದ ವೇಣುಗೋಪಾಲ ದೇವಸ್ಥಾನದಲ್ಲಿ ಹೋಮ, ಪೂಜಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾದರು. ಪತ್ನಿ ಲಕ್ಷ್ಮಿ ಸಿಂಗ್, ಪುತ್ರ ಸಿದ್ದಾರ್ಥ ಸಿಂಗ್ ಹಾಗು ಬಾಮೈದ ಧರ್ಮೇಂದ್ರ ಸಿಂಗ್ ಸಚಿವರಿಗೆ ಸಾಥ್ ನೀಡಿದರು.
ಕಳೆದ ಮೂರು ದಿನಗಳಿಂದ ವೇಣುಗೋಪಾಲ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಬೈಪಾಸ್ನಲ್ಲಿರುವ ತಮ್ಮ ದ್ವಾರಕ ನಿಲಯದಿಂದ ನೇರವಾಗಿ ಪಟೇಲ್ ನಗರದ ವೇಣುಗೋಪಾಲ ದೇವಸ್ಥಾನಕ್ಕೆ ಆಗಮಿಸಿದ ಆನಂದ್ ಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಖಾತೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಅವರು, ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಯಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.