ಬಳ್ಳಾರಿ :ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆಯ ರಚನೆಗೆ ಕಾರಣೀಭೂತರಾದ ಸಚಿವ ಆನಂದ್ ಸಿಂಗ್ ಒಮ್ಮೆ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ತಾವು ಆಡಿದ ಮಾತುಗಳನ್ನ ಮೆಲುಕು ಹಾಕಿಕೊಳ್ಳಬೇಕು ಎನ್ನುವುದು ರಾಜಕೀಯ ವಿಶ್ಲೇಷಕ ಮಾತಾಗಿದೆ.
ಹೌದು, ಇಷ್ಟಕ್ಕೂ ಸಚಿವ ಆನಂದ್ ಸಿಂಗ್ ಏನು ಹೇಳಿದ್ದಾರೆ ಎನ್ನುವುದಕ್ಕೆ ಅವತ್ತಿನ ಮಾತುಗಳನ್ನ ಈಗ ನೆನಪಿಸಿಕೊಳ್ಳುವ ಸಮಯ ಬಂದೊದಗಿದೆ. ಸಚಿವ ಸ್ಥಾನಕ್ಕಾಗಿ ಬ್ಲ್ಯಾಕ್ ಮೇಲ್ ತಂತ್ರಗಾರಿಕೆಗೆ ಇಳಿಯಲ್ಲ. ರಾಜೀನಾಮೆ ಪ್ರಹಸನಕ್ಕೂ ಇಳಿಯಲ್ಲ ಎನ್ನುತ್ತಲೇ ಪರೋಕ್ಷವಾಗಿ ಬ್ಲ್ಯಾಕ್ ಮೇಲ್ ಹಾಗೂ ರಾಜೀನಾಮೆ ಪ್ರಹಸನದ ಮುನ್ಸೂಚನೆಯನ್ನ ಸಚಿವ ಆನಂದ್ ಸಿಂಗ್ ನೀಡಿದ್ದಾರೆ.
ತನಗಿಷ್ಟವಾದ ಖಾತೆ ಹಂಚಿಕೆ ಮಾಡದಿದ್ದರೆ ಮುಂದಿನ ನನ್ನ ನಡೆ ಬೇರೇನೇ ಆಗಿರುತ್ತೆ. ಅದನ್ನ ಮಾಧ್ಯಮಗಳ ಎದುರು ಹೇಳೋಕೆ ಆಗೊಲ್ಲ. ಮೇಲಾಗಿ, ನಾನು ಹಠವಾದಿ. ನಾನು ಅಂದುಕೊಂಡಿದ್ದನ್ನ ಮಾಡಿಯೇ ತೀರುತ್ತೇನೆ ಎಂಬ ಎಚ್ಚರಿಕೆ ಸಂದೇಶವನ್ನೂ ಕೂಡ ರವಾನಿಸಿದ್ದಾರೆ. ಅದಕ್ಕೂ ಮುಂಚಿತವಾಗಿ ನಾನು ಕೇಳಿದ್ದ ಖಾತೆ ಯಾಕೆ ನೀಡಲಿಲ್ಲ. ಅದಕ್ಕೆ ತಕ್ಕ ಉತ್ತರ ನೀಡಲೇಬೇಕೆಂದು ರಾಜ್ಯ ಬಿಜೆಪಿ ನಾಯಕರಿಗೆ ಗುಟುರು ಹಾಕಿದ್ದಾರೆ ಎನ್ನಲಾಗ್ತಿದೆ.
ಅಷ್ಟಕ್ಕೂ ಸಚಿವ ಆನಂದ್ ಸಿಂಗ್ ಕಳೆದ ಒಂದೂವರೆ ವರ್ಷದ ಹಿಂದೆಯೇ ತನಗೆ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯಾದ್ರೆ ಸಾಕು, ನನಗೆ ಯಾವ ಸಚಿವಗಿರಿನೂ ಬೇಡ ಎನ್ನುತ್ತಲೇ ಮಾಜಿ ಸಿಎಂ ಬಿಎಸ್ವೈ ಸರ್ಕಾರದಲ್ಲಿ ಅರಣ್ಯ, ವಕ್ಫ್ ಬೋರ್ಡ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಹೀಗೆ ಹೇಳುತ್ತಲೇ ತಮ್ಮ ಗುರಿಯನ್ನ ಸಾಧಿಸಿದ್ದರು. ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆಯ ರಚನೆ ಮಾಡಿಕೊಂಡರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲೂ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರತ್ಯೇಕ ವಿಜಯನಗರ ಜಿಲ್ಲೆಯ ರಚನೆ ಸುಖಾಂತ್ಯ ಕಂಡ ಬಳಿಕ, ಇದೀಗ ಹೊಸ ವರಸೆಯನ್ನ ತೆಗೆದಿದ್ದಾರೆ.