ಹೊಸಪೇಟೆ (ವಿಜಯನಗರ): ಅ.2 ಮತ್ತು 3 ರಂದು ಅದ್ಧೂರಿಯಾಗಿ ವಿಜಯನಗರ ಜಿಲ್ಲಾ ಉತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಪ್ರವಾಸೋದ್ಯಮ, ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ವಿಜಯನಗರ ಉತ್ಸವ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಸಚಿವರು, ಗಾಂಧಿ ಜಯಂತಿಯ ದಿನದಂದು ವಿಜಯನಗರ ಜಿಲ್ಲೆ ಅಧಿಕೃತವಾಗಿ ಉದ್ಘಾಟನೆಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲ ಮಠಾಧೀಶರು, ಶ್ರೀಗಳು, ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಹಬ್ಬದಂತೆ ಆಚರಣೆ:
ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಿದ್ದು, ಈ ದಿನದ ಸವಿ ನೆನಪಿಗಾಗಿ ಜಿಲ್ಲೆಯ ಎಲ್ಲ ಮನೆಗಳಲ್ಲಿ ರಂಗೋಲಿ, ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದಂತೆ ಆಚರಿಸಲಾಗುವುದು. ಎರಡು ದಿನಗಳ ಕಾಲ ನಗರದ ಎಲ್ಲ ಮಳಿಗೆಗಳು ದೀಪಗಳಿಂದ ಕಂಗೊಳಿಸಲಿವೆ. ಮುಂದಿನ ಜನವರಿ ತಿಂಗಳ ಹೊತ್ತಿಗೆ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳು ಪ್ರಾರಂಭಿಸಲು ಚಿಂತನೆ ನಡೆದಿದೆ. ಈಗಾಗಲೇ ಎಲ್ಲ ಇಲಾಖೆಗಳ ಕಚೇರಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಆದಷ್ಟು ಬೇಗ ಪೂರ್ಣಗೊಳ್ಳಲಿವೆ. ಇದಕ್ಕಾಗಿ ಈಗಾಗಲೇ 6 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.