ಬಳ್ಳಾರಿ: ಪತ್ನಿ ಕೊಲೆ ಮಾಡಿದ ಪತಿಗೆ ನಗರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಬಳ್ಳಾರಿಯಲ್ಲಿ ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ
2013 ರಲ್ಲಿ ಸೀಮೆ ಎಣ್ಣೆ ಸುರಿದು ಹೆಂಡತಿಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ಬಳ್ಳಾರಿಯ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿದೆ.
ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ನಿವಾಸಿ ರಮೇಶ್, ಉಮಾದೇವಿ ಎಂಬುವರನ್ನು ವಿವಾಹವಾಗಿದ್ದ. ಮದುವೆಯಾದ ನಂತರ ಪತ್ನಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದ ಆರೋಪಿ, 2013 ರಲ್ಲಿ ಸೀಮೆ ಎಣ್ಣೆ ಸುರಿದು ಹೆಂಡತಿಯನ್ನು ಕೊಲೆ ಮಾಡಲು ಪ್ರಯತ್ನಿಸಿದ್ದ. ಈ ವೇಳೆ ತೀವ್ರ ಗಾಯಗೊಂಡ ಉಮಾದೇವಿಯನ್ನು ವಿಮ್ಸ್ಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಈ ಕುರಿತು ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ. ಡಿ.ವಿನಯ್, ಆರೋಪಿ ರಮೇಶ್ ವಿರುದ್ಧ ಕಲಂ 498(ಎ) ಮತ್ತು 302 ಭಾ.ದಂ.ಸಂ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಿ, ದಂಡದ ಮೊತ್ತದಲ್ಲಿ ಶೇ.70 ರಷ್ಟನ್ನು ಮೃತಳ ತಾಯಿ ಗಂಗಮ್ಮಗೆ ಪರಿಹಾರ ರೂಪದಲ್ಲಿ ನೀಡುವಂತೆ ಆದೇಶ ಹೊರಡಿಸಿದ್ದಾರೆ.