ಹೊಸಪೇಟೆ(ವಿಜಯನಗರ): ತಾಲೂಕಿನ ನಾಗೇನಹಳ್ಳಿಯ ಎಲ್‌ಎಲ್‌ಸಿ ಕಾಲುವೆ ಸಿಮೆಂಟ್ ಗೋಡೆ ಇಲ್ಲದಿರುವುದರಿಂದ ಮಣ್ಣಿನ ಸವಕಳಿ ಹೆಚ್ಚಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಕಾಲುವೆ ಸುಮಾರು 200 ಮೀಟರ್‌ನಷ್ಟು ಸವಕಳಿಯಾಗಿದ್ದು, ರಸ್ತೆ ಬಿರುಕು ಬಿಡುವಂತ ಸ್ಥಿತಿ ನಿರ್ಮಾಣವಾಗಿದೆ.
ಅಪಾಯದ ಮುನ್ಸೂಚನೆ:ಈಗಾಗಲೇ ಕಾಲುವೆಯ ಪಕ್ಕದಲ್ಲಿ ರಸ್ತೆ ಎರಡು ಭಾಗದಲ್ಲಿ ನೀರಿನ ರಭಸಕ್ಕೆ ಮಣ್ಣು ಕೊರೆದುಕೊಂಡು ಹೋಗಿದೆ. ಈಗ ಮಳೆಗಾಲ ಪ್ರಾರಂಭವಾಗಿದ್ದು, ಭಾರೀ ಮಳೆ ಬಂದರೆ ರಸ್ತೆ ಸಂಪೂರ್ಣವಾಗಿ ಕುಸಿಯಲಿದೆ. ರೈತರು ಓಡಾಟ ಸಂದರ್ಭದಲ್ಲಿ ಮಣ್ಣು ಕುಸಿದರೆ ಅಪಾಯವಾಗಲಿದೆ.
ಕಬ್ಬಿನ ಗಾಣಗಳಿಗೆ ಹೋಗುವುದಕ್ಕೆ ತೊಂದರೆ: ಈ ಕಾಲುವೆ ಮಾರ್ಗವಾಗಿ ಕಬ್ಬಿಣಗಾಣಗಳಿಗೆ ರೈತರು ಎತ್ತಿನ ಬಂಡಿಗಳಲ್ಲಿ ತೆರಳುತ್ತಾರೆ. ತಾಲೂಕಿನ ಕೊಂಡನಾಯಕಹಳ್ಳಿ, ಅನಂತಶಯಗುಡಿ, ಮಲಪನಗುಡಿ, ಬೆಣಕಾಪುರ ತಾಂಡ, ಕೊಂಡನಾಯಕಹಳ್ಳಿ ತಾಂಡದ ನೂರಾರು ರೈತರು ಸಂಚರಿಸುತ್ತಾರೆ. ಹಾಗಾಗಿ ಕೂಡಲೇ ತುಂಗಭದ್ರಾ ಮಂಡಳಿ ರಸ್ತೆಯನ್ನು ದುರಸ್ತಿ ಮಾಡಬೇಕು ಎನ್ನುವುದು ರೈತರ ಒತ್ತಾಸೆ.
ವಾಲ್ ನಿರ್ಮಿಸಲು ಆಗ್ರಹ:ಕಾಲುವೆಯಲ್ಲಿ 200 ಮೀಟರ್‌ನಷ್ಟು ಮಣ್ಣಿನ ದಂಡೆ ಇದೆ. ಇದು ನೀರಿನ ರಭಸಕ್ಕೆ ಕುಸಿಯುತ್ತಿದೆ. ಹೀಗಾಗಿ ಸಿಮೆಂಟ್ ವಾಲ್ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.