ವಿಜಯನಗರ: ಡಿಪ್ಲೊಮಾ ಇನ್ ಮೈನಿಂಗ್ ಇಂಜಿನಿಯರಿಂಗ್ ಕೋರ್ಸ್ ಎಂದರೆ ಹುಡುಗರಿಗೆ ಮಾತ್ರ ಸೀಮಿತವಾಗಿತ್ತು. ಆದ್ರೆ ಗ್ರಾಮೀಣ ಭಾಗದ ಹೆಣ್ಣು ಮಗಳೊಬ್ಬರು ಈ ಕೋರ್ಸ್ನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಟಿ.ಎಂ.ಎ.ಇ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಇನ್ ಮೈನಿಂಗ್ ಇಂಜಿನಿಯರಿಂಗ್ ಕೋರ್ಸ್ ಆರಂಭವಾಗಿ (2008 ರಲ್ಲಿ ಆರಂಭ) ಸುಮಾರು ಹದಿನಾಲ್ಕು ವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ ಹೆಣ್ಣು ಮಗಳೊಬ್ಬರು ಈ ಕೋರ್ಸ್ಗೆ ಪ್ರವೇಶ ಪಡೆದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.
ಹೊಸಪೇಟೆ ತಾಲೂಕಿನ ಜಂಬುನಾಥಹಳ್ಳಿ ಎಂ.ಎಂ.ಎಲ್ ಕ್ಯಾಂಪಿನ ತಾಯಮ್ಮ ಈ ಹೆಗ್ಗಳಿಕೆಗೆ ಪಾತ್ರವಾಗಿರುವ ಯುವತಿ. ಟಿ.ಎಂ.ಎ.ಇ ಪಾಲಿಟೆಕ್ನಿಕ್ ಕಾಲೇಜಿನ ಡಿಪ್ಲೊಮಾ ಇನ್ ಮೈನಿಂಗ್ ಕೋರ್ಸ್ಗೆ ಪ್ರಸಕ್ತ ಸಾಲಿನಲ್ಲಿ ಸೇರಿರುವ ಸುಮಾರು 60 ವಿದ್ಯಾರ್ಥಿಗಳಲ್ಲಿ ತಾಯಮ್ಮ ಮಾತ್ರ ಏಕೈಕ ವಿದ್ಯಾರ್ಥಿನಿ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಕಾಲಿಡದ ಈ ಕ್ಷೇತ್ರದಲ್ಲಿ ತಾಯಮ್ಮ ಸಾಧನೆ ಮಾಡಬೇಕೆಂಬ ಛಲದಿಂದ ಈ ಕೋರ್ಸ್ನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ತಾಲೂಕಿನ ಜಂಬುನಾಥಹಳ್ಳಿಯ ಎಂ. ಎಂ. ಎಲ್ ಕ್ಯಾಂಪಿನ ಆಸುಪಾಸಿನಲ್ಲಿ ಬರೀ ಗಣಿಗಾರಿಕೆಯದ್ದೇ ಕಾರುಬಾರು. ಗಣಿಗಾರಿಕೆ ಆರ್ಭಟದ ನಡುವೆಯೇ ಬೆಳೆದಿರುವ ತಾಯಮ್ಮಳಿಗೆ ತಾನೊಂದು ದಿನ ಗಣಿಗಾರಿಕೆಯ ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಸೆ. ಆದರೆ, ಗಂಡುಮಕ್ಕಳಿಂದ ತುಂಬಿರುವ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಮನಸ್ಸು ಮಾಡಿರುವ ತಾಯಮ್ಮ ಈಗ ಆ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ ಡಿಪ್ಲೋಮಾ ಇನ್ ಮೈನಿಂಗ್ ಕೋರ್ಸ್ ಅನ್ನು ಸೇರಿದ್ದಾರೆ. ಡಿಪ್ಲೋಮಾ ಮುಗಿಸಿದ ನಂತರ ಮೈನಿಂಗ್ ವಲಯದಲ್ಲಿ ಉದ್ಯೋಗವಕಾಶಗಳು ತೆರೆದುಕೊಳ್ಳುವ ಆಗಾಧ ಸಾಧ್ಯತೆಗಳಿರುವುದರಿಂದ ತಾಯಮ್ಮ ದೃಢ ನಿಶ್ಚಯದಿಂದ ವಿದ್ಯಾಭ್ಯಾಸ ಮುಂದುವರೆಸುವ ಪ್ರಯತ್ನದಲ್ಲಿದ್ದಾರೆ.