ಬಳ್ಳಾರಿ: ತಾಲೂಕಿನ ಕಾರೆಕಲ್ಲು ಸಮೀಪದಲ್ಲಿ ನಿನ್ನೆ ರಾತ್ರಿ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಬಳ್ಳಾರಿ ಗ್ರಾಮಾಂತರ ಮೋಕಾ ವ್ಯಾಪ್ತಿಯ ಬ್ಯಾಲಚಿಂತ ಗ್ರಾಮದ ನಿವಾಸಿ ಶಿವಲಿಂಗ (27)ಕೊಲೆಯಾಗಿರುವ ಯುವಕ. ಈತ ಕಾರೆಕಲ್ಲು ಸಮೀಪದ ಜಾನಕಿ ಕಾರ್ಖಾನೆ ಯಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ ವೇಳೆ ಬೈಕ್ನಲ್ಲಿ ಕಾರ್ಖಾನೆಗೆ ಕೆಲಸಕ್ಕೆ ಹೋಗುವ ವೇಳೆ ಅಡ್ಡಗಟ್ಟಿದ ಕೆಲವರು ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾರೆ.
ಹಳೆ ದ್ವೇಷ ಹಿನ್ನೆಲೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ರಮ ಸಂಬಂಧದ ವಿಚಾರದಲ್ಲಿ ಶಿವಲಿಂಗ ಹಾಗೂ ಕೆಲವರ ಮಧ್ಯೆ ಈ ಹಿಂದೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಆ ಸಮಯದಲ್ಲಿ ಸಹ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಹಿಂದಿನ ಘಟನೆ ಆಧರಿಸಿ ಪರಶುರಾಮ, ರಾಜು, ಹೊನ್ನೂರಸ್ವಾಮಿ, ರಾಘವೇಂದ್ರ ಹಾಗೂ ಇತರರ ವಿರುದ್ಧ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅದೇ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಮೃತನ ಸಹೋದರ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪರಮದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.