ವಿಜಯನಗರ :ವಿಜಯನಗರ ಜಿಲ್ಲೆ ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಹಂಪಿ ಉತ್ಸವಕ್ಕೆ ಭಾನುವಾರ ತೆರೆ ಎಳೆಯಲಾಯಿತು. ವಿಜಯನಗರದ ಗತವೈಭವವನ್ನು ನೆನಪಿಸುವಂತೆ ಅದ್ದೂರಿ, ವೈವಿಧ್ಯಮಯವಾಗಿ ಉತ್ಸವ ನಡೆದಿದೆ. ಜನವರಿ 27 ರಿಂದ 29 ರವರೆಗೆ ಮೂರು ದಿನಗಳ ಕಾಲ ಹಂಪಿಯಲ್ಲಿ ವೈಭವ ಕಳೆಗಟ್ಟಿತ್ತು. ಗಾಯತ್ರಿ ಪೀಠ ವೇದಿಕೆ, ಬಸವಣ್ಣ ವೇದಿಕೆ, ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ ಹಾಗೂ ಸಾಸಿವೆಕಾಳು ಗಣಪ ವೇದಿಕೆ ಸೇರಿದಂತೆ ಒಟ್ಟು ನಾಲ್ಕು ವೇದಿಕೆಗಳಲ್ಲಿ ಏಕಕಾಲಕ್ಕೆ ಪರಂಪರೆಯ ಬೆಳಕಿನಲ್ಲಿ ಸಂಸ್ಕೃತಿಯ ಸೊಬಗು ಅನಾವರಣವಾಯಿತು.
ಹಂಪಿ ಉತ್ಸವದಲ್ಲಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ವಿದೇಶಿ ಪ್ರವಾಸಿಗರೂ ಅತ್ಯುತ್ಸಾಹದಿಂದ ಪಾಲ್ಗೊಂಡರು. ವಿಜಯನಗರ ವಸಂತ ವೈಭವ, ಸಾಹಸ ಕ್ರೀಡೆಗಳು, ಜಲ ಕ್ರೀಡೆಗಳು, ಸಾಮ್ರಾಜ್ಯದ ಕುರಿತು ಧ್ವನಿ ಮತ್ತು ಬೆಳಕು ಪ್ರದರ್ಶನವೂ ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮಗಳು ನಡೆದವು. ಕೊನೆಯ ದಿನ ಗಾಯಕ ವಿಜಯ್ ಪ್ರಕಾಶ್ ಮತ್ತು ಬಾಲಿವುಡ್ ಗಾಯಕ ಕೈಲಾಶ್ ಖೇರ್ ಮತ್ತು ತಂಡ ಕನ್ನಡ, ಹಿಂದಿ, ಚಿತ್ರಗೀತೆಗಳನ್ನು ಒಂದು ಗಂಟೆಗೂ ಹೆಚ್ಚು ಕಾಲ ಹಾಡಿ ಜನರನ್ನು ರಂಜಿಸಿದರು.
ಮುಜರಾಯಿ, ಹಜ್, ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಮಾತನಾಡಿ, "ವಿಜಯನಗರ ಸಾಮ್ರಾಜ್ಯದ ವೈಭವದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಹಂಪಿ ಉತ್ಸವ ಯಶಸ್ವಿಯಾಗಿದೆ" ಎಂದರು. ಭಾನುವಾರ ಗಾಯಿತ್ರಿ ವೇದಿಕೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
"ಅದ್ಧೂರಿ ಹಂಪಿ ಉತ್ಸವ ಆಯೋಜನೆಗೆ ಸರ್ಕಾರ ಶ್ರಮಿಸಿದೆ. ನೆಲ, ಜಲ, ನಮ್ಮ ದೇಶದ ಸಂಸ್ಕೃತಿ, ಭಾಷೆ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮೂಲಕ ರಾಷ್ಟ್ರಪ್ರೇಮ ಮೂಡಿಸಲು ಉತ್ಸವ ಸಹಕಾರಿಯಾಗಿದೆ. ನಮ್ಮ ಪರಂಪರೆ ಮರೆಯಬಾರದು" ಎಂದರು.