ಬಳ್ಳಾರಿ: ಬಡ-ಕೂಲಿಕಾರ್ಮಿಕ ಗರ್ಭಿಣಿಯರಿಗೆ ಆರ್ಥಿಕವಾಗಿ ನೆರವಾಗಬೇಕಿದ್ದ ಮಾತೃ ವಂದನಾ ಯೋಜನೆಯು ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದು, ಫಲಾನುಭವಿಗಳಿಗೆ ಸಂಕಷ್ಟ ತಂದೊಡ್ಡಿದೆ. ಕಳೆದೊಂದು ವರ್ಷದ ಹಿಂದೆಯೇ ಈ ಮಾತೃ ವಂದನಾ ಯೋಜನೆ ಅಡಿಯಲ್ಲಿ ಸ್ವೀಕೃತಿಯಾಗಿದ್ದ ಸಾವಿರಾರು ಅರ್ಜಿಗಳು ನೆಟ್ವರ್ಕ್ ಸಮಸ್ಯೆಯಿಂದ ಈಗ ವಿಲೇವಾರಿಯಾಗುತ್ತಿವೆ.
ಇದರ ಜೊತೆ ಅನುದಾನ ಕೊರತೆ ಸಹ ಸಮಸ್ಯೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ. 2020ರ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಅಂದಾಜು 6 ಸಾವಿರಕ್ಕೂ ಅಧಿಕ ಅರ್ಜಿಗಳು ಮಾತೃ ವಂದನಾ ಯೋಜನೆ ಅಡಿಯಲ್ಲಿ ಸ್ವೀಕೃತಿಯಾಗಿವೆ. ಆ ಪೈಕಿ ಮೊದಲ ಹಂತದ ಕಂತಿನಂತೆ ಕ್ರಮವಾಗಿ 2 ಸಾವಿರ ರೂ.ಗಳನ್ನು ನೇರವಾಗಿ ಗರ್ಭಿಣಿಯರ ಉಳಿತಾಯ ಖಾತೆಗೆ ಜಮಾ ಮಾಡಬೇಕಿತ್ತು. ಆದರೆ ಕೇವಲ 3 ಸಾವಿರ ಗರ್ಭಿಣಿಯರ ಉಳಿತಾಯ ಖಾತೆಗೆ ಹಣ ಸಂದಾಯವಾಗಿದೆ.
ಇಲಾಖೆಯ ತಾಂತ್ರಿಕ ದೋಷದಿಂದ ಗರ್ಭಿಣಿಯರ ಕೈ ಸೇರದ ಮಾತೃ ವಂದನಾ ಯೋಜನೆ ಹಣ ಉಳಿದ 3 ಸಾವಿರ ಮಂದಿ ಗರ್ಭಿಣಿಯರು ನೀಡಿರುವ ದಾಖಲೆಗಳು ಸರಿ ಇರದ ಕಾರಣ ಈವರೆಗೂ ಹಣ ಸಂದಾಯವಾಗಿಲ್ಲ ಎಂಬ ಆರೋಪವಿದೆ. ಕಳೆದ 2 ವರ್ಷಗಳಿಂದ ಹಿಂದೆಯೇ ಅಂದಾಜು 70 ಸಾವಿರ ಮಂದಿ ಗರ್ಭಿಣಿಯರಿಗೆ ಈ ಮಾತೃ ವಂದನಾ ಯೋಜನೆ ಅಡಿಯಲ್ಲಿ ಹಣ ಸಂದಾಯವಾಗಿದೆ. ಆದರೆ ಮಹಾಮಾರಿ ಕೋವಿಡ್ ಸಂದರ್ಭ ಕೇವಲ 6 ಸಾವಿರ ಅರ್ಜಿಗಳು ಮಾತ್ರ ಸ್ವೀಕೃತಿಯಾಗಿವೆ.
ಸ್ವೀಕೃತಿಯಾದ ಅರ್ಜಿಗಳಿಗೂ ಕೂಡ ಸಕಾಲದಲ್ಲಿ ಆರ್ಥಿಕ ನೆರವು ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲಗೊಂಡಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಯು.ನಾಗರಾಜ, ಲಾಕ್ಡೌನ್ ಸಂದರ್ಭದಲ್ಲಿ ಮಾತೃ ವಂದನಾ ಯೋಜನೆ ಅಡಿಯಲ್ಲಿ ಅಂದಾಜು 6 ಸಾವಿರ ಅರ್ಜಿಗಳು ಮಾತ್ರ ಸ್ವೀಕೃತಿಯಾಗಿವೆ. ಆ ಪೈಕಿ 3 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈ ಯೋಜನೆ ಮೂಲಕ ನೇರವಾಗಿ ಹಣ ಪಾವತಿಸಲಾಗುತ್ತದೆ.
ಉಳಿದ 3 ಸಾವಿರ ಅರ್ಜಿಗಳಲ್ಲಿ ಕೆಲವೊಂದು ದಾಖಲೆಗಳ ಕೊರತೆ ಎದುರಾಗಿರೋದು ಬೆಳಕಿಗೆ ಬಂದಿದೆ. ಅದನ್ನು ಕ್ಯೂಆರ್ ಸಿಸ್ಟಮ್ ಎಂದು ಕರೆಯಲಾಗುತ್ತೆ. ಅವುಗಳನ್ನು ಅತೀ ಶೀಘ್ರದಲ್ಲೇ ವಿಲೇವಾರಿ ಮಾಡಲಾಗುವುದು. ಮಾತೃ ವಂದನಾ ಯೋಜನೆ ಅಡಿಯಲ್ಲಿ ಸೌಲಭ್ಯ ವಂಚಿತ ಗರ್ಭಿಣಿಯರು ನೇರವಾಗಿ ಕಚೇರಿಗೆ ಬಂದು ಪೂರಕ ದಾಖಲೆ ಒದಗಿಸಿದರೆ ಸಾಕು. ಬೇಗನೆ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಿಐಟಿಯುನ ಸದಸ್ಯೆ ಜೆ.ಚಂದ್ರಕುಮಾರಿ, ಮಾತೃ ವಂದನಾ ಯೋಜನೆಯು ಬಡ ಮತ್ತು ಕೂಲಿಕಾರ್ಮಿಕ ಗರ್ಭಿಣಿಯರಿಗೆ ನೆರವಾಗೋ ಯೋಜನೆಯಾಗಬೇಕಿತ್ತು. ಅದರಲ್ಲೂ ವಿಶೇಷವಾಗಿ ಈ ಲಾಕ್ಡೌನ್ ಸಂದರ್ಭದಲ್ಲಿ ಗರ್ಭಿಣಿಯರ ಆರ್ಥಿಕ ನೆರವಿಗೆ ಕೇಂದ್ರ ಸರ್ಕಾರ ಶ್ರಮಿಸಬೇಕಿತ್ತು. ಆದರೆ ಈ ಯೋಜನೆಯು ಗರ್ಭಿಣಿಯರ ಪಾಲಿಗೆ ಮಾರಕವಾಗಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಸರ್ಕಾರದ ಯಾವುದೇ ಗೋಶಾಲೆಗಳಿಲ್ಲ: ಸಚಿವ ಪ್ರಭು ಚವ್ಹಾಣ್