ಬಳ್ಳಾರಿ: ಮಹಾನಗರ ಪಾಲಿಕೆಯ ಅಧೀನದಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ 1.39 ಕೋಟಿ ರೂ. ಬಾಕಿ ಇದ್ದು, ಅದನ್ನು ಒಂದು ವಾರದೊಳಗೆ ವಸೂಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಅಧೀನದಲ್ಲಿರುವ ಮಳಿಗೆಗಳ ಬಾಡಿಗೆ ವಸೂಲಿ ಮಾಡಿ: ಬಳ್ಳಾರಿ ಜಿಲ್ಲಾಧಿಕಾರಿ
ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಮಹಾನಗರ ಪಾಲಿಕೆಯ ಅಧೀನದಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ಶೀಘ್ರವಾಗಿ ವಸೂಲಿ ಮಾಡುವಂತೆ ಸೂಚನೆ ನೀಡದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ 194 ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ಸಮರ್ಪಕವಾಗಿ ವಸೂಲಿಯಾಗುತ್ತಿಲ್ಲ. ಸದ್ಯ 1.39ಕೋಟಿ ರೂ. ಬಾಕಿ ಇದೆ. ನಿಗದಿತ ಪ್ರಮಾಣದಲ್ಲಿ ಶೀಘ್ರವಾಗಿ ವಸೂಲಿ ಮಾಡಬೇಕು ಎಂದು ಸೂಚನೆ ನೀಡಿದರು.
ಮುಂಡರಗಿ ಆಶ್ರಯ ಬಡಾವಣೆಯಲ್ಲಿ ಈಗಾಗಲೇ 5616 ಮನೆಗಳನ್ನು ನಿರ್ಮಿಸಲಾಗುತ್ತಿದೆ. 23 ಸಾವಿರ ಜನರು ಅರ್ಜಿ ಸಲ್ಲಿಸಿದ್ದರು, ಇದರಲ್ಲಿ 5616 ಜನರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ, ಅದರಲ್ಲಿ ಮೊದಲ ಹಂತದಲ್ಲಿ 10 ಸಾವಿರ ರೂ. ಗಳನ್ನು 2222 ಜನರು ಪಾವತಿಸಿದ್ದಾರೆ. 359 ಜನ 25 ಸಾವಿರ ರೂ.ಪಾವತಿಸಿದ್ದಾರೆ. ನಿಗದಿಪಡಿಸಿದಷ್ಟು ಜನ ಇದುವರೆಗೆ ಹಣ ಪಾವತಿಸಿಲ್ಲ, ಹಾಗಾಗಿ, ಅವರಿಗೆ ಕೊನೆಯ ಅವಕಾಶ ನೀಡಲಾಗಿದ್ದು ಏ. 10 ರ ಒಳಗೆ ಹಣ ಪಾವತಿಸಬೇಕು. ಇಲ್ಲದಿದ್ದಲ್ಲಿ ಅರ್ಜಿ ಸಲ್ಲಿಸಿದ ಜನರಲ್ಲಿ ಮೊದಲು ಯಾರು ಹಣ ಪಾವತಿಸುತ್ತಾರೋ ಅವರಿಗೆ ಮನೆ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.