ಬೆಂಗಳೂರು/ಬಳ್ಳಾರಿ:ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೂ ಕೊರೊನಾ ಸೋಂಕು ಹರಡುವ ಭೀತಿ ಶುರುವಾಗಿದೆ.
ಪ್ರವೀಣ್ ಸೂದ್ ಅವರು ಬಳ್ಳಾರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿದ್ದ ಬಳ್ಳಾರಿಯ ಮೂವರು ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆ ಅಲ್ಲಿದ್ದ ಪ್ರತಿಯೊಬ್ಬ ಅಧಿಕಾರಿಗಳಿಗೂ ಆತಂಕ ಶುರುವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಎಸ್ಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಪೊಲೀಸ್ ಠಾಣೆಯ ಸಿಪಿಐ ಭಾಗಿಯಾಗಿದ್ದರು. ನಿನ್ನೆ ದಿನ ಸಿಪಿಐ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವೇಳೆ ಪ್ರವೀಣ್ ಸೂದ್ ಅವರು ಸಿಬ್ಬಂದಿ ಜೊತೆ ಬಹಳ ಹತ್ತಿರದಿಂದ ಸಮಸ್ಯೆಗಳನ್ನು ಆಲಿಸಿದ್ದರಂತೆ.
ಬಳ್ಳಾರಿ ಜಿಲ್ಲಾ ಎಸ್ಪಿ ಸಿ.ಕೆ. ಬಾಬಾ, ಬಳ್ಳಾರಿ ವಲಯ ಐಜಿಪಿ ಎಂ. ನಂಜುಂಡಸ್ವಾಮಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈಗಾಗಲೇ ಬಳ್ಳಾರಿ ಜಿಲ್ಲಾ ಹೆಚ್ಚುವರಿ ಎಸ್ಪಿ ಲಾವಣ್ಯ ಅವರು ಹೋಂಕ್ವಾರಂಟೈನ್ನಲ್ಲಿದ್ದಾರೆ.
ಬೆಂಗಳೂರು ನಗರದ ಡಿ ಜಿ ಕಚೇರಿಯಲ್ಲಿ ಸೋಂಕು ಪತ್ತೆಯಾದ ನಂತರ ಮುಂಜಾಗ್ರತ ಕ್ರಮವಾಗಿ ಡಿಜಿ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಆದರೆ ಇದೀಗ ಬಳ್ಳಾರಿಯ ಸಭೆಯಲ್ಲಿ ಭಾಗಿಯಾಗಿದ್ದ, ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿರುವ ಕಾರಣ ಪ್ರವೀಣ್ ಸೂದ್ ಅವರಿಗೆ ಕೊರೊನಾ ಭೀತಿ ಎದುರಾಗಿದೆ.
ಇತ್ತೀಚೆಗೆ ಪ್ರವೀಣ್ ಸೂದ್ ಅವರು ಪೊಲೀಸರಿಗೆ ಕೊರೊನಾ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆ, ಜಿಲ್ಲೆಗಳಿಗೆ ಭೇಟಿ ನೀಡಿ ಪ್ರತಿ ಸಿಬ್ಬಂದಿಯ ಆರೋಗ್ಯವನ್ನು ನೋಡಿಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ರು.