ಹೊಸಪೇಟೆ (ವಿಜಯನಗರ): ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಕೊರೊನಾ ತಡೆಗಟ್ಟಲು ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಗ್ರಾಮಸ್ಥರು ಹೊಸ ಪ್ರಯತ್ನ ಮಾಡಿದ್ದಾರೆ. ಗ್ರಾಮದ ಸುತ್ತಲೂ ನಾಲ್ಕು ಚೆಕ್ ಪೋಸ್ಟ್ ನಿರ್ಮಿಸಿ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಸುಖಾ ಸುಮ್ಮನೆ ಗ್ರಾಮಕ್ಕೆ ಬರುವವರನ್ನು ಮುಲಾಜಿಲ್ಲದೇ ವಾಪಸ್ ಕಳುಹಿಸಲಾಗುತ್ತಿದೆ.
ಕೊರೊನಾ ನಿಯಂತ್ರಿಸಲು ಗ್ರಾಮದ ಸುತ್ತಲೂ ಚೆಕ್‌ಪೋಸ್ಟ್ ನಿರ್ಮಾಣ
ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಗೇನಗಳ್ಳಿ, ಬೆನಕಾಪುರ, ಕಳ್ಳಿರಾಂಪುರ, ಬಸವನದುರ್ಗ ಗ್ರಾಮಗಳು ಬರುತ್ತವೆ. ಈ ಎಲ್ಲಾ ಗ್ರಾಮಗಳಲ್ಲಿ ಹೊರಗಿನವರು ಬರುವಾಗ ಮೊದಲಿಗೆ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಹೊರಗಡೆ ಓಡಾಡುವುದಕ್ಕೆ ಅವಕಾಶವನ್ನು ನೀಡಲಾಗಿದೆ. ಅನಗತ್ಯವಾಗಿ ಓಡಾಡುವವರಿಗೆ ವಾಪಸ್ ಕಳುಹಿಸಿಕೊಡಲಾಗುತ್ತಿದೆ.
ಗ್ರಾಮಕ್ಕೆ ಭೇಟಿ ನೀಡಿವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ನಾಗೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡು ಹಳ್ಳಿಗಳಲ್ಲಿ ಇದುವರೆಗೆ ಒಂದೇ ಒಂದು ಪಾಸಿಟಿವ್ ಪ್ರಕರಣವೂ ಪತ್ತೆಯಾಗಿಲ್ಲ. ಇದುವರೆಗೆ ಈ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಯಾವುದೇ ಸಾವುಗಳು ಸಂಭವಿಸಿಲ್ಲ. ಈವರೆಗೆ 28 ಪಾಸಿಟಿವ್ ಕೇಸ್ಗಳು ಕಂಡು ಬಂದಿದ್ದವು. ಈಗ 10-12 ಸಕ್ರೀಯ ಪ್ರಕರಣಗಳಿವೆ. ಕೊರೊನಾ ಹೆಚ್ಚಾಗಬಾರದೆಂದು ಗ್ರಾ.ಪಂ. ಈ ತೀರ್ಮಾನ ಮಾಡಿದ್ದು, ಗ್ರಾ.ಪಂ. ಸಿಬ್ಬಂದಿಯನ್ನೇ ತಪಾಸಣೆಗೆ ನೇಮಕ ಮಾಡಿ, ಕೊರೊನಾ ಕಂಟ್ರೋಲ್ ಗೆ ಮುಂದಾಗಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷೆ ಹುಲಿಗೆಮ್ಮ ಮಾತನಾಡಿ, ಗ್ರಾಮದಲ್ಲಿ ನಿರಂತರವಾಗಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಊರಿಂದ ಹೊರಗಡೆ ಹಾಗೂ ಹೊರಗಡೆಯಿಂದ ಊರೊಳಗೆ ಯಾರೂ ಬರಬಾರದು ಎಂದು ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಪ್ರತಿಯೊಬ್ಬರ ವಾಹನದ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಬರೆದುಕೊಂಡು ಓಡಾಡುವುದಕ್ಕೆ ಅನಕೂಲ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.