ಬೆಂಗಳೂರು :ಸಚಿವ ಆನಂದ್ ಸಿಂಗ್ ಅವರಿಗೆ ತವರು ಜಿಲ್ಲೆ ವಿಜಯನಗರ ಉಸ್ತುವಾರಿ ನೀಡಿ ಹೊರಡಿಸಲಾಗಿದ್ದ ಆದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರದ್ದು ಮಾಡಿದ್ದಾರೆ. ಇಂದು ಬೆಳಗ್ಗೆ ವಿಜಯನಗರ ಉಸ್ತುವಾರಿಯಾಗಿ ಸಚಿವ ಆನಂದ್ ಸಿಂಗ್ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.
ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಉಸ್ತುವಾರಿಯನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಕೊಪ್ಪಳ ಜಿಲ್ಲೆ ಉಸ್ತುವಾರಿಯನ್ನು ಸಚಿವೆ ಶಶಿಕಲಾ ಜೊಲ್ಲೆಗೆ ನೀಡಿದರೆ, ವಿಜಯನಗರ ಜಿಲ್ಲೆ ಉಸ್ತುವಾರಿಯನ್ನು ಸಚಿವ ಆನಂದ್ ಸಿಂಗ್ ಗೆ ನೀಡಲಾಗಿತ್ತು. ಆದರೆ ಇದೀಗ ಈ ಆದೇಶವನ್ನು ರದ್ದುಗೊಳಿಸಲಾಗಿದೆ.
ಹೈ ಕಮಾಂಡ್ ಸೂಚನೆಯಂತೆ ಯಾವ ಸಚಿವರಿಗೂ ತವರು ಜಿಲ್ಲೆಯ ಉಸ್ತುವಾರಿ ನೀಡುವ ಹಾಗಿಲ್ಲ. ಆದರೆ, ಆನಂದ್ ಸಿಂಗ್ ಗೆ ತವರು ಜಿಲ್ಲೆ ಉಸ್ತುವಾರಿ ನೀಡಿರುವುದು ಹುಬ್ಬೇರಿಸುವಂತೆ ಮಾಡಿತ್ತು. ಅನೇಕ ಸಚಿವರುಗಳಿಂದ ತವರು ಜಿಲ್ಲೆ ಉಸ್ತುವಾರಿ ನೀಡುವಂತೆ ಒತ್ತಡ ಇದ್ದರೂ, ಯಾರಿಗೂ ತವರು ಜಿಲ್ಲೆಗಳ ಉಸ್ತುವಾರಿ ನೀಡಿರಲಿಲ್ಲ.
ಇದೀಗ ಸಚಿವ ಆನಂದ್ ಸಿಂಗ್ ಗೆ ತವರು ಜಿಲ್ಲೆ ಉಸ್ತುವಾರಿ ನೀಡುತ್ತಿದ್ದ ಹಾಗೇ ಇತರೆ ಸಚಿವರುಗಳು ತಮಗೂ ತವರು ಜಿಲ್ಲೆ ಉಸ್ತುವಾರಿ ನೀಡುವಂತೆ ಸಿಎಂ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ಸಿಎಂ ಇದೀಗ ಯಾರಿಗೂ ತವರು ಜಿಲ್ಲೆ ಬೇಡವೆಂದು ಇಂದು ಹೊರಡಿಸಲಾಗಿದ್ದ ವಿಜಯನಗರ ಹಾಗೂ ಕೊಪ್ಪಳ ಉಸ್ತುವಾರಿ ನೇಮಕ ಆದೇಶವನ್ನು ರದ್ದು ಪಡಿಸಿದ್ದಾರೆ.
ಓದಿ :ಯತಿರಾಜ ಮಠದ ಶ್ರೀಗಳಿಗೆ ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ