ಬಳ್ಳಾರಿ: ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೆ ಮತ ಹಾಕಲು ಮತದಾರರಿಗೆ ಸ್ಲಿಪ್ ವಿತರಿಸುತ್ತಿದ್ದ ಆರೋಪದಡಿ ಕಂಪ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್‍ಬಾಬು ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಟ್ಟಣದ ವಿನಾಯಕನಗರ, ತಾಲೂಕಿನ ನಂ.10 ಮುದ್ದಾಪುರ ಹಾಗೂ ದೇವಸಮುದ್ರ ಗ್ರಾಮದಲ್ಲಿ ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೆ ಬಿಜೆಪಿ ಅಭ್ಯರ್ಥಿ ಟಿ.ಎಚ್.ಸುರೇಶ್ ಬಾಬು ಅವರಿಗೆ ಮತ ನೀಡಿ ಎಂದು ಮತದಾರರ ಹೆಸರು, ವಿಳಾಸ, ಮತದಾನ ಮಾಡುವ ಸ್ಥಳದ ವಿವರವುಳ್ಳ ಚೀಟಿಗಳನ್ನು ನೀಡುತ್ತಿರುವ ಬಗ್ಗೆ ಚುನಾವಣಾ ನಿಗಾ (ಎಫ್‍ಎಸ್‍ಟಿ) ತಂಡದ ಅಧಿಕಾರಿಗಳಿಗೆ ದೂರು ಬಂದಿತ್ತು.
ಈ ಕುರಿತು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿದಾಗ ಅನುಮತಿ ಇಲ್ಲದೆ ಕೆಲವು ಯುವಕರು ಮೈ ಅಸೆಂಬ್ಲಿ ಎನ್ನುವ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಮತದಾರರ ಹೆಸರು, ವಿಳಾಸ, ವೋಟರ್ ಐಡಿ ನಂಬರ್, ಮತದಾನ ಮಾಡುವ ಸ್ಥಳದ ವಿವರ ನೀಡಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ತಿಳಿಸಿರುವುದು ಕಂಡುಬಂದಿದೆ.