ಬಳ್ಳಾರಿ: ಸಂಸದ ವೈ.ದೇವೇಂದ್ರಪ್ಪ ಮತ್ತು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ನವದೆಹಲಿಯ ಸಂಸತ್ ಭವನದಲ್ಲಿಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ಸುಧಾ ಕ್ರಾಸ್ನ ರೈಲ್ವೆ ಹಳಿಗೆ ರೈಲ್ವೆ ಓವರ್ ಸೇತುವೆ ನಿರ್ಮಾಣ:
ಬಳ್ಳಾರಿ ಮತ್ತು ಬಳ್ಳಾರಿ ಕಂಟೋನ್ಮೆಂಟ್ ನಿಲ್ದಾಣಗಳ ನಡುವಿನ ಹುಬ್ಬಳ್ಳಿ-ಗುಂತಕಲ್ ವಿಭಾಗದಲ್ಲಿ ಎಲ್ಸಿ ಸಂಖ್ಯೆ 1108 ರ ಬದಲಾಗಿ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ ಸಂಬಂಧ ನೈರುತ್ಯ ರೈಲ್ವೆಯ ಎಲ್ಸಿ ನಂ. 1108 ರ ಬದಲಾಗಿ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸ್ಥಳೀಯವಾಗಿ ಸುಧಾ ಕ್ರಾಸ್ ಎಂದು ಕರೆಯಲ್ಪಡುವ ಈ ಎಲ್ಸಿ 1108 ಎನ್ಎಚ್ -63 ನಂತಹ ಹಲವು ಪ್ರಮುಖ ಮುಖ್ಯ ರಸ್ತೆಗಳನ್ನು ಸಂಪರ್ಕಿಸುವ ಒಂದು ದೊಡ್ಡ ಜಂಕ್ಷನ್ ಆಗಿದೆ.
ಇದು ಹೊಸಪೇಟೆಯಿಂದ ಬಳ್ಳಾರಿ ನಗರಕ್ಕೆ ಇರುವ ಏಕೈಕ ಮುಖ್ಯ ಪ್ರವೇಶ ರಸ್ತೆಯಾಗಿದ್ದು, ಟಿಬಿ ಸ್ಯಾನಿಟೋರಿಯಂ, ಒಪಿಡಿ ಆಸ್ಪತ್ರೆ, ಬೆಳಗಲ್ಲು ಕ್ರಾಸ್, ಕಂಟೋನ್ಮೆಂಟ್, ರೇಡಿಯೋ ಪಾರ್ಕ್ ಇನ್ನಿತರ ಸುತ್ತಮುತ್ತಲ ಪ್ರದೇಶದಲ್ಲಿ ಬರುತ್ತವೆ. ಸಾರ್ವಜನಿಕ, ಖಾಸಗಿ ವಾಹನಗಳು, ಎನ್‌ಎಚ್ -63 ರಲ್ಲಿ ಹಾದುಹೋಗುವ ಸರಕು ಸಾಗಣೆ ವಾಹನಗಳು ಮತ್ತು ಪಕ್ಕದ ರಿಂಗ್ ರಸ್ತೆಯಿಂದ ಬರುವ ವಾಹನಗಳು (ಆಂಧ್ರಪ್ರದೇಶವನ್ನು ಎನ್‌ಎಚ್ -63 ಗೆ ಸಂಪರ್ಕಿಸುತ್ತದೆ) ಈ ರಸ್ತೆ ಮೂಲಕ ಬಳ್ಳಾರಿ ನಗರವನ್ನು ಪ್ರವೇಶಿಸಬೇಕಾಗಿದೆ. ಈಗಿರುವ ಏಕೈಕ ಸುಧಾ ಕ್ರಾಸ್ (ಎಲ್.ಸಿ. ನಂ 1108) ಬಳಿಯ ರೈಲ್ವೆ ಗೇಟ್ ಬಳಿ ಹಲವು ಅಪಘಾತ ಮತ್ತು ಟ್ರಾಫಿಕ್ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಎಲ್ಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‌ಎಚ್ 63) ಬರುವುದರಿಂದ ಈ ಎಲ್ಸಿಯನ್ನು ಏಕ ಘಟಕದ ಆಧಾರದ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಿಸಲು ಸಚಿವರಿಗೆ ಮನವಿ ಸಲ್ಲಿಸಿದರು.