ಬಳ್ಳಾರಿ :ಗಣಿನಗರಿಯ ವಿವಾದಿತ ಚಾಗನೂರು-ಸಿರವಾರ ಗ್ರಾಮಗಳ ಸ್ಥಳದಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣದ ಕುರಿತಾದ ಚರ್ಚೆ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ವಿವಾದಿತ ಭೂಮಿಯಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕಾ? ಬೇಡವೋ ಎಂಬ ಚರ್ಚೆಯೂ ಕೂಡ ನಡೆದಿದೆ. ಆದರೆ, ವಾಸ್ತವವಾಗಿ ರಾಜ್ಯ ಸರ್ಕಾರ ಮಾತ್ರ ವಿವಾದಿತ ಚಾಗನೂರು-ಸಿರವಾರ ಭೂಮಿಯಲ್ಲೇ ಈ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಒಲವು ತೋರಿದೆಯಂತೆ.
ಹೀಗಾಗಿ, ಕಳೆದ ಬಾರಿಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಚಾಗನೂರು-ಸಿರವಾರ ರೈತರಿಂದ ವಿರೋಧ ವ್ಯಕ್ತವಾಗಿತ್ತು. ಈಗ ಮತ್ತೆ ಅದು ಮುನ್ನಲೆಗೆ ಬಂದಿದೆ. ಆದ್ರೆ, ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು, ಇದು ಚರ್ಚೆಯಷ್ಟೇ ಎಂದು ವಿಷಯಾಂತರ ಮಾಡದೇ ಒಳ ಒಳಗೆ ಈ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಅನುದಾನದ ಕೊರತೆ ಎದುರಾದ್ರೆ ಜಿಲ್ಲಾ ಖನಿಜ ನಿಧಿಯಿಂದಲೂ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.