ವಿಜಯನಗರ: ವಿಶ್ವಪ್ರಸಿದ್ಧ ಹಂಪಿಯ ಹೇಮಕೂಟ ಪರ್ವತ ಜೈನ ದೇಗುಲದ ಸ್ಮಾರಕದ ಮೇಲೇರಿ ಡಾನ್ಸ್ ಮಾಡಿ, ಅದರ ವಿಡಿಯೊ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ ಯುವಕನನ್ನು ಹಂಪಿ ಪ್ರವಾಸಿ ಠಾಣೆ ಪೊಲೀಸರು ಇಂದು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಾಳೇನಹಳ್ಳಿಯ ದೀಪಕ್‌ಗೌಡ (25) ಬಂಧಿತ ಯುವಕ. ಇತ್ತೀಚೆಗೆ ಹಂಪಿಗೆ ಬಂದಿದ್ದ ದೀಪಕ್‌ಗೌಡ ಹಂಪಿ ಜೈನ್ ದೇವಾಲಯದ ಮೇಲೆ ಹಾಗೂ ಅದರ ಪರಿಸರದಲ್ಲಿ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ.
ಈ ಸಂಬಂಧ ಫೆ.28ರಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಎಂ.ಸಿ.ಸುನೀಲ್‌ಕುಮಾರ್ ಅವರು ಹಂಪಿ ಪ್ರವಾಸಿ ಠಾಣೆಗೆ ದೂರು ಕೊಟ್ಟಿದ್ದರು. ಆ ದೂರು ಆಧರಿಸಿ ದೀಪಕ್ ಗೌಡನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:ಫೆ.26ರಂದುವಿಶ್ವ ಪಾರಂಪರಿಕ ತಾಣ ಹಂಪಿಯ ಹೇಮಕೂಟ ಪರ್ವತದ ಜೈನ ದೇವಾಲಯದ ಸ್ಮಾರಕದ ಮೇಲೆ ದೀಪಕ್ ಗೌಡ ಕುಣಿದು ಕುಪ್ಪಳಿಸಿದ ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ವೈರಲ್ ಕೂಡಾ ಆಗಿತ್ತು. ಇದಕ್ಕೆ ನೆಟ್ಟಿಗರು ಮತ್ತು ಸ್ಮಾರಕ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರಿ ಉದ್ಯೋಗಿ ಸುನೀಲ್ ಕುಮಾರ್ ತಮ್ಮ ಮೇಲಾಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಿ ಹಂಪಿ ಪೊಲೀಸ್ ಠಾಣೆಯಲ್ಲಿ ದೀಪಕ್ ಗೌಡ ವಿರುದ್ಧ ದೂರು ದಾಖಲಿಸಿದ್ದರು.