ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನಾದ್ಯಂತ ಸುರಿದ ವಿಪರೀತ ಮಳೆಯಿಂದಾಗಿ ಹಲವು ಗ್ರಾಮಗಳಲ್ಲಿ 90ಕ್ಕೂ ಅಧಿಕ ಮನೆಗಳ ತಡೆಗೋಡೆ, ಮೇಲ್ಛಾವಣಿಯ ಕುಸಿತ ಕಂಡಿದ್ದು, ದುರದೃಷ್ಟಾವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಲ್ಲದೆ, ಹೊಲ, ಗದ್ದೆಗಳು ಮಳೆ ನೀರಿನಿಂದ ಜಲಾವೃತವಾಗಿದೆ.
ಮಳೆಯಿಂದಾಗಿ ಹೂವಿನಹಡಗಲಿಯಲ್ಲಿ 90ಕ್ಕೂ ಹೆಚ್ಚು ಮನೆಗಳಿಗೆ ಹಾನಿ!
ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಹೂವಿನಹಡಗಲಿ ತಾಲೂಕಿನಾದ್ಯಂತ ಹಲವು ಗ್ರಾಮಗಳಲ್ಲಿ 90ಕ್ಕೂ ಅಧಿಕ ಮನೆಗಳ ತಡೆಗೋಡೆ, ಮೇಲ್ಛಾವಣಿಯ ಕುಸಿತ ಕಂಡಿವೆ.
ಚಿಗುರೊಡೆಯುವ ಮುನ್ನವೇ ಬೆಳೆಗಳು ನೆಲಕಚ್ಚಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆನಷ್ಟ ಉಂಟಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಇಲ್ಲಿ ಬರಗಾಲದಲ್ಲಿ ಸುರಿಯುತ್ತಿದ್ದ ತುಂತುರು ಮಳೆಯ ನೀರಿನ ತೇವಾಂಶದಲ್ಲೇ ನಾನಾ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಈಗ ವಿಪರೀತ ಮಳೆಯಿಂದಾಗಿ ಬೆಳೆನಷ್ಟ ಉಂಟಾಗಿರುವುದರಿಂದ ರೈತರ ಮೊಗದಲಿ ಆತಂಕದ ಸೂತಕದ ಛಾಯೆ ಮಡುಗಟ್ಟಿದೆ.
90 ಮನೆಗಳಿಗೆ ಹಾನಿ: ತಾಲೂಕಿನ ಕುರುವತ್ತಿಯಲ್ಲಿ 25 ಮನೆಗಳು ಸೇರಿದಂತೆ ಹಿರೇಹಡಗಲಿ ಹೋಬಳಿಯಲ್ಲಿ 60, ಹಡಗಲಿ ಹೋಬಳಿಯಲ್ಲಿ 35 ಮನೆಗಳು ಸೇರಿದಂತೆ 90ಕ್ಕೂ ಅಧಿಕ ಮನೆಗಳು ಕುಸಿತಗೊಂಡಿವೆ. ಜನ, ಜಾನುವಾರುಗಳಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.