ಬೆಳಗಾವಿ: ಅತಿವೃಷ್ಟಿಯಿಂದ ಕುಸಿದ ಮನೆಯನ್ನು ಪರಿಹಾರಕ್ಕಾಗಿ ‘ಬಿ’ ಕೆಟಗರಿಗೆ ಸೇರಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಜಿಲ್ಲೆಯ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮ ಲೆಕ್ಕಾಧಿಕಾರಿ ಅಶೋಕ ತಳವಾರ ಎಸಿಬಿ ಬಲೆಗೆ ಬಿದ್ದಿದ್ದಾನೆ. ಸಂತ್ರಸ್ತನಿಂದ 15 ಸಾವಿರ ಲಂಚ ಸ್ವೀಕರಿಸುವಾಗ ಬೆಳಗಾವಿ ಎಸಿಬಿ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಯನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಮಸಗುಪ್ಪಿಯ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಅಶೋಕ ತಳವಾರ ಮೂಡಲಗಿಯ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಅತಿವೃಷ್ಟಿಗೆ ಕುಸಿದ ಮನೆಯ ವಿವರಗಳನ್ನು ಪರಿಹಾರಕ್ಕಾಗಿ ‘ಬಿ’ ಕೆಟಗರಿಗೆ ಸೇರಿಸಲು ಅರಭಾವಿ ತೋಟದ ನಿವಾಸಿಯೂ ಆಗಿರುವ ಸಂತ್ರಸ್ತ ಆನಂದ ಧರ್ಮಟ್ಟಿ ಎಂಬಾತನಿಂದ ರೂ. 30 ಸಾವಿರ ಲಂಚದ ಬೇಡಿಕೆ ಇಟ್ಟಿದ್ದನಂತೆ. ಈ ಕುರಿತಂತೆ ಸಂತ್ರಸ್ತ ವ್ಯಕ್ತಿಯು ಎಸಿಬಿಯಲ್ಲಿ ದೂರು ದಾಖಲಿಸಿದ್ದ.
ಸಂತ್ರಸ್ತನಿಂದ ರೂ. 15 ಸಾವಿರ ಸ್ವೀಕರಿಸುವಾಗ ಎಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಎಸಿಬಿ ಎಸ್ಪಿ ಬಿ.ಎಸ್.ನೇಮಗೌಡರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ವೇಣುಗೋಪಾಲ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎ.ಎಸ್.ಗುದಿಗೊಪ್ಪ, ಸುನೀಲ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.