ಬೆಳಗಾವಿ:ಸಾರಿಗೆ ಇಲಾಖೆ ವಿಶೇಷ ತಂಡಗಳನ್ನು ರಚಿಸಿ ನಿರಂತರ ದಾಳಿ ನಡೆಸುತ್ತಿದ್ದರೂ ಅರ್ಹತಾ ಪ್ರಮಾಣ ಪತ್ರ ಇಲ್ಲದೇ ವಾಹನಗಳ ಸಂಚಾರ ಬೆಳಗಾವಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಸವಾರರು ದಂಡ ಪಾವತಿಸುತ್ತಿದ್ದಾರೆಯೇ ಹೊರತು ಅರ್ಹತಾ ಪ್ರಮಾಣ ಪತ್ರ ಮಾತ್ರ ಪಡೆದುಕೊಳ್ಳುತ್ತಿಲ್ಲ.
ಅರ್ಹತಾ ಪ್ರಮಾಣ ಪತ್ರ ಇಲ್ಲದೇ ರಸ್ತೆಗಿಳಿಯುತ್ತಿರುವ ವಾಹನಗಳಿಗೆ ದಂಡ: ಸಾರಿಗೆ ಆಯುಕ್ತ
ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದರೂ ಅರ್ಹತಾ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳದೇ ವಾಹನಗಳು ರಸ್ತೆಗಿಳಿಯುತ್ತಿವೆ. ಹೀಗಾಗಿ, ಅವುಗಳಿಗೆ ಕಡಿವಾಣ ಹಾಕಲು ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಅರ್ಹತಾ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ಸಾರಿಗೆ ಇಲಾಖೆ ನಿಲ್ಲಿಸಿತ್ತು. ಈಗ ಆರಂಭವಾಗಿದ್ದರೂ ಪ್ರಮಾಣ ಪತ್ರ ಪಡೆದುಕೊಳ್ಳಲು ಸವಾರರು ಮುಂದಾಗುತ್ತಿಲ್ಲ. ಹೀಗಾಗಿ, ಪ್ರಮಾಣ ಪತ್ರವಿಲ್ಲದೇ ರಸ್ತೆಗಿಳಿಯುವ ವಾಹನಗಳಿಗೆ ಕಡಿವಾಣ ಹಾಕಲು ಪರಿಶೀಲನಾ ಕಾರ್ಯಕ್ಕೆ ಚಾಲನೆ ನೀಡಲು ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 6 ಸಾರಿಗೆ ನಿರೀಕ್ಷಕರ ಕಚೇರಿಗಳಿದ್ದು, ಅರ್ಹತಾ ಪ್ರಮಾಣ ಪತ್ರಗಳ ತಪಾಸಣೆ ಜಿಲ್ಲಾದ್ಯಂತ ನಡೆಸಲಾಗುತ್ತಿದೆ. 2019ರ ಏಪ್ರಿಲ್ 1ರಿಂದ 2020ರ ನವೆಂಬರ್ 30ರವರೆಗೆ 40 ಸಾವಿರ ವಾಹನಗಳಿಗೆ ದಂಡ ವಿಧಿಸಲಾಗಿದೆ. ಇತ್ತ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು, ಬೇಜವಾಬ್ದಾರಿತನ ತೋರುತ್ತಿದ್ದಾರೆ.