ಬೆಳಗಾವಿ :ಶಾಮನೂರು ಶಿವಶಂಕರಪ್ಪ ಅವರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿಲ್ಲ. ಯಾವ ಮಟ್ಟದಲ್ಲಿ ನಮ್ಮ ಸಮಾಜದ ಅಧಿಕಾರಿಗಳಿಗೆ ಉನ್ನತ ಸ್ಥಾನಮಾನಗಳು ಸಿಗಬೇಕಿತ್ತೋ ಆ ಮಟ್ಟದಲ್ಲಿ ಸಿಗ್ತಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಪರಿಗಣಿಸಬೇಕು ಎಂದು ಶ್ರೀಶೈಲದ ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಇದನ್ನೆಲ್ಲ ತಿಳಿದುಕೊಳ್ಳಬೇಕು, ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಸ್ಥಾನಮಾನ ಗೌರವ ನೀಡಬೇಕು. ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳನ್ನ ಒಬಿಸಿ ಪಟ್ಟಿಗೆ ಸೇರಿಸಬೇಕು. ನಾವೂ ಸಹ ಇವತ್ತು ಎರಡು ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಮಾಡಲಿದ್ದೇವೆ. ವೀರಶೈವ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿಗೆ ಸೇರಿಸಲು ಸರ್ಕಾರ ಶಿಫಾರಸು ಮಾಡಬೇಕು ಮತ್ತು ಶೀಘ್ರದಲ್ಲಿಯೇ ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ ಎಂದರು.
ಶಿರಹಟ್ಟಿ ಫಕ್ಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಮಠಾಧಿಪತಿಗಳ ಬೇಡಿಕೆ ಒಂದೇ ಆಗಿದ್ದು, ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಒಳಪಂಗಡಗಳನ್ನು ಸೇರಿಸಲು ಹಕ್ಕೊತ್ತಾಯದ ಉದ್ದೇಶ ಇಟ್ಟುಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಯನ್ನು ಶೀಘ್ರವೇ ಈಡೇರಿಸಬೇಕು. ಬಹುಸಂಖ್ಯಾತರಾಗಿರುವ ವೀರಶೈವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಯಾವುದೇ ಸರ್ಕಾರ ಬರಲಿ, ಹೋಗಲಿ ನಮ್ಮ ಹಕ್ಕೊತ್ತಾಯ ಮಾತ್ರ ಮುಂದುವರೆಯುತ್ತದೆ. ಶಾಮನೂರು ಶಿವಶಂಕರಪ್ಪ ಅವರು ಸರ್ಕಾರದಲ್ಲಿದ್ದಾರೆ. ಅವರಿಗೆ ಸರಿ ಅನಿಸಿದ್ದನ್ನು ಅವರು ಹೇಳಿದ್ದಾರೆ. ಈಗ ನಾವು ಒಬಿಸಿ ವಿಚಾರವಾಗಿ ಬಂದಿದ್ದು, ಅದನ್ನು ಟಿಸಿಲುಗೊಳಿಸೋದು ಬೇಡ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.