ಬೆಳಗಾವಿ: ಅತಿವೃಷ್ಟಿ, ಸಾರಿಗೆ ಇಲಾಖೆ ಸಿಬ್ಬಂದಿಯ ಪ್ರತಿಭಟನೆ ಹಾಗೂ ಕೋವಿಡ್‌ನಿಂದಾಗಿ ಈವರೆಗೆ ಸಾರಿಗೆ ಇಲಾಖೆಗೆ ಅಂದಾಜು 4 ಸಾವಿರ ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಸಾರಿಗೆ ಇಲಾಖೆ ಸಚಿವರಾಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮಾರ್ಚ್‌ನಿಂದ ಈವರೆಗೆ ಸುಮಾರು 4 ಸಾವಿರ ಕೋಟಿಗಿಂತ ಹೆಚ್ಚು ನಷ್ಟವಾಗಿದೆ. ನಾನು ಇಲಾಖೆ ಜವಾಬ್ದಾರಿ ತಗೆದುಕೊಂಡ ಮೇಲೆ 20 ಜಿಲ್ಲೆಗಳಲ್ಲಿ ಅತಿವೃಷ್ಟಿ ಬಂತು. ಇದನ್ನು ಸರಿದೂಗಿಸುವ ಸಂದರ್ಭದಲ್ಲಿ ಕೊರೊನಾ ಬಂತು. ಕೊರೊನಾ ಬಳಿಕ ಇಲಾಖೆ ಸಿಬ್ಬಂದಿ ಪ್ರತಿಭಟನೆ ಮಾಡಿದ್ರು. ಪ್ರತಿಭಟನೆ ಮುಗಿಯುತ್ತಿದ್ದಂತೆ ಕೋವಿಡ್ ಎರಡನೇ ಅಲೆ ಬಂತು. ಒಟ್ಟಾರೆ ಎಲ್ಲ ಇಲಾಖೆಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ತಾಪತ್ರಯ ಅನುಭವಿಸಿದ ಇಲಾಖೆ ಅಂದ್ರೆ ಅದು ಸಾರಿಗೆ ಇಲಾಖೆ.
ಇಂತಹ ಸಂಕಷ್ಟದ ಸಮಯದಲ್ಲೂ ನೌಕರರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರದಿಂದ 2,600 ಕೋಟಿಯಷ್ಟು ಹಣ ತೆಗೆದುಕೊಂಡು ಸಾರಿಗೆ ಸಿಬ್ಬಂದಿಗೆ ಸಂಪೂರ್ಣ ಸಂಬಳ ಕೊಡಲಾಗುತ್ತಿದೆ ಎಂದರು.
ಸದ್ಯ ಬಸ್‌ಗಳಲ್ಲಿ ಪ್ರತಿಶತ 50ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಈಗ ಬರುವ ಆದಾಯ ಸಂಬಳ, ಇಂಧನಕ್ಕೂ ಕೊರತೆ ಆಗುತ್ತಿದೆ. ಹೀಗಾಗಿ ಸರ್ಕಾರದಿಂದ ಹಣ ತಂದು ಸಂಬಳ ನೀಡುವ ಅನಿವಾರ್ಯತೆ ಇದೆ. ಸದ್ಯ ಬಸ್‌ಗಳಲ್ಲಿ ಹೆಚ್ಚಿನ ಜನರನ್ನು ಓಡಾಡಲು ಬಿಡುವಂತಿಲ್ಲ ಎಂದರು.
ಸಾರಿಗೆ ಸಿಬ್ಬಂದಿ ಪ್ರತಿಭಟನೆ:
ಜುಲೈ 05ರ ಬಳಿಕ ಪ್ರತಿಭಟನೆ ನಡೆಸಲು ಸಾರಿಗೆ ಸಿಬ್ಬಂದಿಯ ಚಿಂತನೆ ವಿಚಾರವಾಗಿ ಮಾತನಾಡಿ, ಸಾರಿಗೆ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಲ್ಲ ಎಂದಿದ್ದಾರೆ. ಯಾರೇ ಹೇಳಿಕೆ ಕೊಟ್ಟರೂ ಇಂತಹ ಕಷ್ಟಕಾಲದಲ್ಲಿ ಪ್ರತಿಭಟನೆಯ ಚಿಂತನೆ ಮಾಡಬಾರದಿತ್ತು ಎಂದಿದ್ದಾರೆ. ತಪ್ಪು ಮಾಹಿತಿ ಕೊಟ್ಟು ಅನೇಕರು ಹುನ್ನಾರ ಮಾಡಿದ್ರು. ನಿಮ್ಮ ಜೊತೆ ಕೈ ಜೋಡಿಸುತ್ತೇವೆ ಎಂದು ಸಂಘಟನೆ ಜವಾಬ್ದಾರಿ ಹೊತ್ತ ಮುಖಂಡರು ಹೇಳಿದ್ದಾರೆ ಎಂದರು.
ಸರ್ಕಾರದ ಏಳಿಗೆ ಸಹಿಸದ ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರಚೋದನೆ ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗಬೇಕು. ಇಲಾಖೆಗೆ ಹಾನಿ ಆಗಬೇಕು ಅಂತಾ ಹುನ್ನಾರ ನಡೆಸಿ ಪ್ರತಿಭಟನೆ ನಡೆಸಿದ್ರು. ಕೆಲವೇ ದಿನಗಳಲ್ಲಿ ಅವರರ್ಯಾರು ಅಂತಾ ಬಹಿರಂಗ ಆಗಲಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.
ಡೆಲ್ಟಾ ಪ್ಲಸ್ ವೈರಸ್ ಭೀತಿ ಮಧ್ಯೆ ಅಂತಾರಾಜ್ಯ ಬಸ್‌ಗಳ ಓಡಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಗಡಿಭಾಗದಲ್ಲಿ ಕೋವಿಡ್ ನೆಗೆಟಿವ್ ವರದಿ ಇದ್ರೆ ಮಾತ್ರ ಪ್ರಯಾಣಿಕರ ಪ್ರವೇಶಕ್ಕೆ ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಕೋವಿಡ್ ಮೊದಲನೇ, ಎರಡನೇ ಅಲೆ ಸಾಕಷ್ಟು ಅನುಭವ ಕೊಟ್ಟಿದೆ. ಮಹಾರಾಷ್ಟ್ರದಲ್ಲಿ ಈ ಕೋವಿಡ್ ಹೊಸ ರೂಪ ಪಡೆದಿದೆ. ಬ್ಲ್ಯಾಕ್ ಫಂಗಸ್, ಯೆಲ್ಲೋ ಫಂಗಸ್ ಸೇರಿ ಅನೇಕ ಸಮಸ್ಯೆ ತಂದೊಡ್ಡಿವೆ. ಇತ್ತ ಮಹಾರಾಷ್ಟ್ರದಿಂದ ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಜನರು ಸಂಪರ್ಕಿಸುತ್ತಾರೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಗಡಿ ಭಾಗದಲ್ಲಿ ನಾಕಾಬಂದಿ ಮಾಡಲು ಸೂಚನೆ ನೀಡಲಾಗಿದ್ದು, ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಚಿಂತನೆ ಮಾಡಲಾಗುತ್ತಿದೆ.
ಇದನ್ನೂ ಓದಿ:ಚಾಮರಾಜನಗರದಿಂದ ಕಾಂಗ್ರೆಸ್‌ನ 'ಸಾಂತ್ವನ ಅಭಿಯಾನ ': ಕೋವಿಡ್ನಿಂದ ಮೃತರಾದ ಮನೆಗಳಿಗೆ ಡಿಕೆಶಿ ಭೇಟಿ
ಇದರ ಜತೆಗೆ ಗಡಿಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಸೂಚನೆ ಕೊಡಲಾಗುವುದು. ಆ ಬಗ್ಗೆ ಈಗಾಗಲೇ ಬೆಳಗಾವಿ ಡಿಸಿ ಜತೆ ಮಾತನಾಡಿದ್ದೇನೆ. ನಿಪ್ಪಾಣಿ, ಕಾಗವಾಡ, ಅಥಣಿಯಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು.ಯಾವುದೇ ಕಾರಣಕ್ಕೂ ಮೂರನೇ ಅಲೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು. ನಾಳೆ ಈ ಕುರಿತಂತೆ ಬೆಂಗಳೂರಿಗೆ ಹೋಗಿ ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ ಎಂದು ಡಿಸಿಎಂ ಸವದಿ ಹೇಳಿದ್ರು.