ಚಿಕ್ಕೋಡಿ :ಶ್ರಾವಣ ಮಾಸದ ನಿಮಿತ್ತ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಶಕ್ತಿದೇವತೆ ಮಾಯಕ್ಕ ದೇವಿಯ ದರ್ಶನಕ್ಕೆ ಹೊರಟ ಭಕ್ತಾದಿಗಳ ಟ್ರ್ಯಾಕ್ಟರ್ ಪಲ್ಟಿಯಾಗಿ, ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ್ ಬ್ಯಾರೇಜ್ ಮೇಲೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಮೃತರನ್ನು ಅಥಣಿ ತಾಲೂಕಿನ ಕಕಮರಿ ಗ್ರಾಮದ ಅಕ್ಷತಾ ಕನಮಡಿ (20) ಎಂದು ಗುರುತಿಸಲಾಗಿದೆ. ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಕಮರಿ ಗ್ರಾಮದಿಂದ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. 20ಕ್ಕೂ ಅಧಿಕ ಭಕ್ತರು ಡಬಲ್ ಟ್ರಾಲಿ ಹೊಂದಿದ್ದ ಟ್ರ್ಯಾಕ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು. ಎರಡು ಅಡಿ ಮುಂದೆ ಹೋಗಿದ್ದರೆ ಟ್ರ್ಯಾಕ್ಟರ್ ನದಿಗೆ ಬೀಳುವ ಸಾಧ್ಯತೆ ಇತ್ತು. ಗಾಯಾಳುಗಳನ್ನು ಅಥಣಿ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೂಡ್ಸ್ ವಾಹನಕ್ಕೆ ಬಸ್ ಡಿಕ್ಕಿ: ಸರ್ಕಾರಿ ಬಸ್ ಹಾಗೂ ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಗಾಯಗೊಂಡಿದ್ದು, ಗೂಡ್ಸ್ ವಾಹನದ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ (ಬುಧವಾರ) ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಮಖಂಡಿ ಘಟ್ಟಕ್ಕೆ ಸೇರಿದ ಸರ್ಕಾರಿ ಬಸ್ ಅಥಣಿ ಪಟ್ಟಣಕ್ಕೆ ಆಗಮಿಸುತ್ತಿದ್ದಾಗ ಸವದಿ ದರ್ಗಾ ಬಳಿ ಅಪಘಾತ ಸಂಭವಿಸಿದೆ. ಗೂಡ್ಸ್ ವಾಹನ ಚಾಲಕನನ್ನು ಸ್ಥಳೀಯರ ಸಹಾಯದಿಂದ ಹೊರತೆಗೆದು ಅಥಣಿ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.