ನಾಗ್ಪುರ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಮಾಹಿತಿ ನೀಡಿರುವುದು... ಬೆಳಗಾವಿ:ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಪ್ರಕರಣ ಸಂಬಂಧ ಹಿಂಡಲಗಾ ಜೈಲಿನಲ್ಲಿದ್ದ ಕೈದಿ ಜಯೇಶ್ ಪೂಜಾರಿ ಬಳಿಯ ಡೈರಿಯನ್ನು ಜಪ್ತಿ ಮಾಡಲಾಗಿದೆ ಎಂದು ನಾಗ್ಪುರ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ. ಜೈಲು ಅಧಿಕಾರಿಗಳ ಅನುಮತಿ ಪಡೆದು ಶಂಕಿತ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. 2008ರಲ್ಲಿ ಕೊಲೆ ಆರೋಪದಡಿ ಜಯೇಶ್ ಎಂಬ ಆರೋಪಿ ಜೈಲು ಸೇರಿದ್ದ. 2018ರಲ್ಲಿ ಆತನಿಗೆ ಗಲ್ಲು ಶಿಕ್ಷೆ ಪ್ರಕಟವಾಗಿತ್ತು. ಜೈಲಿನಿಂದ ತಪ್ಪಿಸಿಕೊಳ್ಳಲು ಸಹ ಆತ ಯತ್ನಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಸದ್ಯ ನಾಗ್ಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದ ಆಯುಕ್ತ ಅಮಿತೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಜಯೇಶ್ ಕ್ರೈಂ ಹಿಸ್ಟರಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಕೈದಿ ಜಯೇಶ್ ಪೂಜಾರಿ 2008ರಲ್ಲಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ. 12-08-2016ರಲ್ಲಿ ಮಂಗಳೂರು 5ನೇ ಸೆಷನ್ಸ್ ನ್ಯಾಯಾಲಯ ಜಯೇಶ್ ಪೂಜಾರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. 2017ರಲ್ಲಿ ಗಲ್ಲು ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡಾಗಿತ್ತು. ಈತ ಮೂಲತಃ ಕಡಬಾ ತಾಲೂಕು ಶಿರಾಡಿ ನಿವಾಸಿ. 2018ರಲ್ಲಿ ಅಂದಿನ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ಅವರಿಗೆ ಜೀವ ಬೆದರಿಕೆ ಕರೆ ಮಾಡಿದ್ದ ಈತ 1-5-2019ರಂದು ಮೈಸೂರು ಜೈಲಿಗೆ ಸ್ಥಳಾಂತರಗೊಂಡಿದ್ದ. ಬಳಿಕ 14-09-2021ರಂದು ಮರಳಿ ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಳಿಸಲಾಗಿತ್ತು.
ಇದನ್ನೂ ಓದಿ:ಬೆಳಗಾವಿಯಿಂದಲೇ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ
ಫೋನ್ ಮಾಡಿ ಜೀವ ಬೆದರಿಕೆ:ಬೆಳಗಾವಿಯಿಂದಲೇ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಮಾಡಲಾಗಿದೆ. ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿಯೇ ಶನಿವಾರ ಗಡ್ಕರಿ ಮೊಬೈಲ್‌ಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಈ ವಿಚಾರವನ್ನು ಗಡ್ಕರಿ ಮಹಾರಾಷ್ಟ್ರದ ನಾಗ್ಪುರ ಪೊಲೀಸರ ಗಮನಕ್ಕೆ ತಂದಿದ್ದು, ಆರೋಪಿ ಶೋಧಕ್ಕೆ ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿಗೆ ಬಂದಿದ್ದಾರೆ. ನಾಗ್ಪುರ ಪೊಲೀಸರಿಗೆ ಕೊಲ್ಲಾಪುರ, ಸಾಂಗ್ಲಿ ಬೆಳಗಾವಿ ನಗರ ಪೊಲೀಸರು ಸಾಥ್ ನೀಡಿದ್ದಾರೆ.
ಮೂರು ಬೆದರಿಕೆ ಕರೆಗಳು: ಶನಿವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕಚೇರಿಗೆ ಮೂರು ಬೆದರಿಕೆ ಕರೆಗಳು ಬಂದಿದ್ದವು. ಕಚೇರಿಯ ಲ್ಯಾಂಡ್ಲೈನ್ ನಂಬರ್ಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿದ್ದರು. ನಿನ್ನೆ ಬೆಳಗ್ಗೆ 11.25, 11.32 ಮತ್ತು ಮಧ್ಯಾಹ್ನ 12.32ಕ್ಕೆ ಬಿಎಸ್‌ಎನ್‌ಎಲ್‌ನಿಂದ ಮೂರು ಕರೆಗಳು ಬಂದಿವೆ. ಕರೆಯಲ್ಲಿ ಹಣಕ್ಕೆ ಬೇಡಿಕೆಯಿಟ್ಟಿರುವುದು ಮಾತ್ರವಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು. ಕಚೇರಿಯ ಸಿಬ್ಬಂದಿ ಈ ಅನಾಮಧೇಯ ಕರೆಗಳನ್ನು ಸ್ವೀಕರಿಸಿದ್ದರು. ತಕ್ಷಣವೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಕರೆಗಳ ವಿವರಗಳ ದಾಖಲೆಗಳನ್ನು ಕಲೆ ಹಾಕಿದ್ದಾರೆ.
ಪೊಲೀಸ್ ಭದ್ರತೆ ಹೆಚ್ಚಳ:ಬೆದರಿಕೆ ಕರೆಗಳ ವಿಷಯ ತಿಳಿದ ತಕ್ಷಣವೇ ನಾಗ್ಪುರ ಪೊಲೀಸರು ಸಚಿವ ನಿತಿನ್ ಗಡ್ಕರಿ ಕಚೇರಿಗೆ ಭದ್ರತೆ ಹೆಚ್ಚಿಸಿದ್ದಾರೆ. ಗಡ್ಕರಿ ಅವರು ಪ್ರಸ್ತುತ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ನಾಗ್ಪುರದಲ್ಲೇ ಇದ್ದಾರೆ. ಒಂದು ದಿನದ ಹಿಂದೆ ಅವರು ಗ್ರೇಟರ್ ನೋಯ್ಡಾದಲ್ಲಿ ಆಟೋ ಎಕ್ಸ್ಪೋ -2023ರ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸದ್ಯ ಬೆದರಿಕೆ ಕರೆಗಳು ಬಂದ ಕಾರಣದಿಂದಾಗಿ ನಾಗ್ಪುರದಲ್ಲಿ ಗಡ್ಕರಿ ಭಾಗವಹಿಸುವ ಕಾರ್ಯಕ್ರಮ ಸ್ಥಳದಲ್ಲೂ ಭದ್ರತೆ ಹೆಚ್ಚಿಸಲಾಗುವುದು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಬಂದವು ಮೂರು ಬೆದರಿಕೆ ಕರೆಗಳು: ಪೊಲೀಸ್ ಭದ್ರತೆ ಹೆಚ್ಚಳ