ಕರ್ನಾಟಕ

karnataka

ETV Bharat / state

ಕಬ್ಬಿನ ಬಾಕಿ ಹಣ ಉಳಿಸಿಕೊಂಡ ರಾಜಕಾರಣಿಗಳು : ಯಾವ ನಾಯಕ ಎಷ್ಟು ಕೊಡಬೇಕು ಗೊತ್ತಾ?

ಕುಂದಾನಗರಿ ಬೆಳಗಾವಿ ಜಿಲ್ಲೆಯನ್ನು ಆಳುತ್ತಿರುವ ಪ್ರಭಾವಿ ರಾಜಕಾರಿಣಿಗಳು, ಕಬ್ಬಿನ ಬಾಕಿ ಹಣ​ ಪಾವತಿಸದೆ ಇರುವುದರಿಂದ ಕಬ್ಬು ಬೆಳೆಗಾರರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಯಾವ ನಾಯಕರು ಎಷ್ಟೆಷ್ಟು ಹಣ ಬಾಕಿ ಉಳಿಸಿಕೊಂಡಿದ್ದಾರೆ ಗೊತ್ತಾ?

By

Published : Jun 19, 2019, 12:16 PM IST

ಕಬ್ಬಿನ ಬಾಕಿ ಹಣ ಉಳಿಸಿಕೊಂಡ ರಾಜಕಾರಣಿಗಳು

ಬೆಳಗಾವಿ: ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆಗಳ ಒಡೆಯರಾಗಿರುವ ರಾಜಕಾರಣಿಗಳು ಈ ಸಲವೂ ಕಬ್ಬಿನ ಬಾಕಿ ಬಿಲ್ ಉಳಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಕಬ್ಬು ಬೆಳೆಗಾರರ ಕಂಗೆಣ್ಣಿಗೆ ಗುರಿಯಾಗಿದ್ದಾರೆ.

ರಾಜ್ಯದ ಪ್ರಭಾವಿ ರಾಜಕಾರಣಿ, ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ ಕತ್ತಿ ಒಡೆತನದ ವಿಶ್ವರಾಜ್ ಸಕ್ಕರೆ ಕಾರ್ಖಾನೆ 3.3 ಕೋಟಿ ರೂ., ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್​ ಒಡೆತನದ ಅಥಣಿ ಶುಗರ್ಸ್ 6.46 ಕೋಟಿ ರೂ., ಖಾನಾಪುರದ ಪ್ರಭಾವಿ ಬಿಜೆಪಿ ಮುಖಂಡ ವಿಠ್ಠಲ್​ ಹಲಗೇಕರ ಮಾಲೀಕತ್ವದ ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ 3.24 ಕೋಟಿ ರೂ., ಮಹಿಳಾ ಉದ್ಯಮಿ ವಿದ್ಯಾ ಮರಕುಂಬಿ ಮಾಲೀಕತ್ವದ ಮುನವಳ್ಳಿಯ ರೇಣುಕಾ ಶುಗರ್ಸ್ 4.50 ಕೋಟಿ ರೂ., ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ಬಾಕಿ ಹಣ ಉಳಿಸಿಕೊಂಡಿವೆ.

ಕಬ್ಬಿನ ಬಾಕಿ ಹಣ ಉಳಿಸಿಕೊಂಡ ರಾಜಕಾರಣಿಗಳು

4 ಖಾಸಗಿ ಕಾರ್ಖಾನೆ ಹಾಗೂ 5 ಸಹಕಾರಿ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನಲ್ಲಿ ರೈತರು ಪೂರೈಸಿದ ಕಬ್ಬಿಗೆ ನಿಗದಿತ ಸಮಯದಲ್ಲಿ ಬಿಲ್ ಪಾವತಿಸಿಲ್ಲ. ಕಬ್ಬು ಅರೆಯುವ ಹಂಗಾಮು ಆರಂಭಕ್ಕೂ ಮುನ್ನವೇ ರಾಜ್ಯ ಸರ್ಕಾರ ಎಲ್ಲ ಕಾರ್ಖಾನೆಗಳಿಗೆ ಎಂಆರ್​ಪಿ ದರ ನಿಗದಿ ಮಾಡುವಂತೆ ಹಾಗೂ ನಿಗದಿತ ಸಮಯದಲ್ಲಿ ಕಬ್ಬು ಪೂರೈಸುವಂತೆ ಸೂಚನೆ ನೀಡಿತ್ತು. ಆದರೆ, ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶವನ್ನು ಗಾಳಿಗೆ ತೂರಿವೆ.

ಹೀಗಾಗಿ ಈ ಎಲ್ಲ 9 ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕಬ್ಬಿನ ಬಾಕಿ ಹಣ ನೀಡುವ ವಿಚಾರದಲ್ಲಿ ರೈತರನ್ನು ಸತಾಯಿಸುತ್ತಲೇ ಬಂದಿರುವ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವಿರುದ್ಧ ಈ ಸಲವೂ ರೈತರು ಬೀದಿಗಳಿಯುವುದು ನಿಶ್ಚಿತವಾಗಿದೆ.

ABOUT THE AUTHOR

...view details