ಚಿಕ್ಕೋಡಿ : ಮುನಿಶ್ರೀ ಚಿನ್ಮಯಸಾಗರಜೀ ಮಹಾರಾಜ ಅಮರ ರಹೇ, ಜಂಗಲವಾಲೆ ಬಾಬಾ ಅಮರ ರಹೇ ಎಂಬ ಜಯ ಘೋಷಣೆಗಳೊಂದಿಗೆ ರಾಷ್ಟ್ರಸಂತ ಮುನಿಶ್ರೀ 108 ಚಿನ್ಮಯಸಾಗರಜೀ (ಜಂಗಲವಾಲೆ ಬಾಬಾ) ಮಹಾರಾಜರ ಅಂತಿಮ ಕ್ರಿಯೆಯು ಜೈನ ಧರ್ಮದ ವಿಧಿ ವಿಧಾನಗಳಂತೆ ಜಗೂಳ ಗ್ರಾಮದ ಮುನಿಶ್ರೀಗಳ ಪೂವಾರ್ಶಮದ ಮನೆ ಸಮೀಪ ಇರುವ ಹೊಲದಲ್ಲಿ ಆಚಾರ್ಯರು, ಮುನಿಶ್ರೀಗಳು, ಆರ್ಯಿಕಾ ಮಾತಾಗಳು, ಭಟ್ಟಾರಕರು ಮತ್ತು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಚಿನ್ಮಯಸಾಗರಜೀ ಮಹರಾಜರ ಅಂತಿಮ ಯಾತ್ರೆ ಸಲ್ಲೇಖನ ಸ್ವೀಕರಿಸಿದ ಸ್ಥಳದಿಂದ ಗ್ರಾಮದ ಬೀದಿಗಳಲ್ಲಿ ವಾದ್ಯ, ಆನೆ, ಕುದುರೆಗಳೊಂದಿಗೆ ಮರೆವಣಿಗೆಯ ಮುಖಾಂತರ ಸಂಚರಿಸಿ ಜೀನೈಕ್ಯರಾಗುವ ಸ್ಥಳಕ್ಕೆ ಆಗಮಿಸಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮುನಿಶ್ರೀಗಳ ಅಂತಿಮ ವಿಧಿ ವಿಧಾನಗಳು ಜರುಗಿದವು.
ಬಿಎಸ್ವೈ ಸಂತಾಪ:ಜೈನ ಮುನಿ ಚಿನ್ಮಯ ಸಾಗರಜೀ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆದಿವಾಸಿಗಳ ಮತ್ತು ವಿವಿಧ ಸಮುದಾಯದ ಜನರಲ್ಲಿ ಅಹಿಂಸಾ ತತ್ತ್ವ ಬೋಧಿಸುವುದರ ಜೊತೆಗೆ ದುಶ್ಚಟಗಳಿಂದ ಮುಕ್ತರನ್ನಾಗಿಸಲು ಶ್ರಮಿಸಿದ ಅವರ ತತ್ತ್ವಾದರ್ಶಗಳು ನಮ್ಮೆಲ್ಲರಿಗೂ ಸದಾ ಸ್ಪೂರ್ತಿ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಹಾಗೂ ಅವರ ಅನುಯಾಯಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಹೀಗಿತ್ತುಚಿನ್ಮಯಸಾಗರಜೀ ಮಹರಾಜ ಜೀವನದ ಹಾದಿ
ಬಾಲ್ಯದಿಂದಲೇ ಆಧ್ಯಾತ್ಮದ ಒಲವು ಹೊಂದಿದ್ದ ಯುವಕ ಧರಣೇಂದ್ರ ಸನ್ಯಾಸ ದೀಕ್ಷೆ ಸ್ವೀಕರಿಸಿ ಮಧ್ಯಪ್ರದೇಶದ ಅರಣ್ಯಗಳಲ್ಲಿ ಕಠೋರ ತಪಸ್ಸು ಮಾಡಿ ಜಂಗಲವಾಲೆ ಬಾಬಾ ಎಂದೇ ಖ್ಯಾತಿ ಪಡೆವರು
ಜುಗೂಳ ಗ್ರಾಮ, ಮುನಿಶ್ರೀ ಜಂಗಲವಾಲೆ ಬಾಬಾ ಅವರ ಜನ್ಮ ಭೂಮಿ. ಅಣ್ಣಪ್ಪ ಪದ್ಮಣ್ಣ ಮೋಳೆ ಹಾಗೂ ಶ್ರೀಮತಿ ಹೀರಾಬಾಯಿ ದಂಪತಿ ಹಿರಿಯ ಪುತ್ರನಾಗಿ ಜನಿಸಿದರು. ಶ್ರೀಮತಿ ಹೀರಾಬಾಯಿ ಅವರ ಗರ್ಭ ಸಂಜಾತ ಶಿಶುವಿಗೆ ನಾಮಕರಣ ಮಾಡಿದ್ದು ಪಾರ್ಶ್ವನಾಥ. ಆದರೆ, ಎಲ್ಲರೂ ಅವರನ್ನು ಪ್ರೀತಿಯಿಂದ ಧರಣೇಂದ್ರ ಎಂದು ಕರೆದರು.
ಬೆಳೆವ ಕುಡಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿಯೇ ಇವರ ಆಟ - ಪಾಠಗಳು ಚಟುವಟಿಕೆಗಳು ಮಾಮೂಲು ಬಾಲಕರಂತಿರಲಿಲ್ಲ. ಕ್ಷಣ ಹೊತ್ತು ಮನೆಯಲ್ಲಿರಲು ಒಪ್ಪುತ್ತಿರಲಿಲ್ಲ. ಜೈನ ಬಸದಿ ಜಮೀನು, ಕಬ್ಬಿನ ಗದ್ದೆಗಳು, ಕಾಡು ಮೇಡಿನಂಥಹ ಏಕಾಂತ ವಾಸ ಇವರಿಗೆ ಹೆಚ್ಚು ಪ್ರಿಯವಾಗಿತ್ತು. ಬೆಳೆಯುತ್ತಿದ್ದ ಬಾಲಕ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಮುಗಿಸಿ ಪಕ್ಕದೂರಿನ ಕಾಗವಾಡದಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದರು. ಬಾಲ್ಯದಲ್ಲಿಯೇ ಎಲ್ಲ ಧರ್ಮಗಳ ಕಾರ್ಯಗಳಲ್ಲಿ ಆಸಕ್ತಿ ವಹಿಸಿದ ಇವರು, ಜೈನ ವೀರಶೈವ ಧರ್ಮಗಳ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದರು.
1988ರಲ್ಲಿ ಮುನಿದೀಕ್ಷೆ :ಜುಗೂಳದಲ್ಲಿಯೇ ಜನಿಸಿದ್ದ ಚಿನ್ಮಯಸಾಗರ ಮಹರಾಜರು, ಜೈನ ಧರ್ಮದ ಅಹಿಂಸಾ ತತ್ತ್ವಗಳಿಗೆ ಆಕರ್ಷಿತರಾಗಿ 1988 ರ ಮಾರ್ಚ್ 31 ರಂದು ಆಚಾರ್ಯ ವಿದ್ಯಾಸಾಗರ ಅವರಿಂದ ಮುನಿದೀಕ್ಷೆ ಪಡೆದಿದ್ದರು. ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮೊದಲಾದ ಕಡೆಗಳಲ್ಲಿ ತಲಾ ಎರಡು ವರ್ಷ, ಮಧ್ಯಪ್ರದೇಶದಲ್ಲಿ 15 ವರ್ಷ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ತಲಾ 5 ವರ್ಷಗಳವರೆಗೆ ಆದಿವಾಸಿಗಳ ಮನಪರಿವರ್ತನೆ ಮಾಡಿದ್ದರು. ಹೆಚ್ಚು ಕಾಲ ಅರಣ್ಯ ಪ್ರದೇಶದಲ್ಲಿ ಸಮಯ ಕಳೆದಿದ್ದರಿಂದ ಅವರನ್ನು ಜಂಗಲವಾಲೆ ಬಾಬಾ ಎಂದು ಭಕ್ತರು ಕರೆಯುತ್ತಿದ್ದರು.
ಅರಣ್ಯಗಳಲ್ಲಿ ಕಠೋರ ತಪಸ್ಸು :
1995-96 ರಲ್ಲಿ ಮೂರು ತಿಂಗಳಗಳವರೆಗೆ ಮಹಾರಾಷ್ಟ್ರದ ಕುಂತಲಗಿರಿ ಸಮೀಪದ ಅರಣ್ಯದಲ್ಲಿ, ಡಿಸೆಂಬರ್ 2000 ದಿಂದ ಜನವರಿ 2001ರ ವರೆಗೆ ಟಡಾ ಕೆಸಲಿ ಅರಣ್ಯದಲ್ಲಿ ಘೋರ ಸಾಧನೆ, 2002 ಜೂನ್‍ನಲ್ಲಿ ಮಂಡಾಲಾ ಅರಣ್ಯದಲ್ಲಿ, 19 ಡಿಸೆಂಬರ್ 2005 ರಿಂದ 2 ಫೆಬ್ರವರಿ ಖಿಲಖಿಲಿಯಾ ಜಿಲ್ಲೆಯ ರಾಯಸೇನ ಅರಣ್ಯದಲ್ಲಿ ಮಹಾಸಾಧನೆ. 12 ನವೆಂಬರ್ ಇಂದ ಡಿಸೆಂಬರ್ ವರೆಗೆ ಇಂದೌರ ಖಂಡ್ವಾ ಅರಣ್ಯದಲ್ಲಿ ತಪ ಸಾಧನೆ. 15 ಜುಲೈದಿಂದ 12 ಸೆಪ್ಟೆಂಬರ್ ಕೋಲಿಪುರ ಅರಣ್ಯದಲ್ಲಿ ತಪ ಸಾಧನೆ. ಇನ್ನು ಹಲವು ಅರಣ್ಯ ಪ್ರದೇಶದಲ್ಲಿ ತಪಸ್ಸು ಮಾಡಿದ್ದಾರೆ.