ಚಿಕ್ಕೋಡಿ (ಬೆಳಗಾವಿ):ವಿದ್ಯುತ್ ತಂತಿ ಸ್ಪರ್ಶಿಸಿ 26 ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಸರ್ವೆ ನಂಬರ್ 8 ಮತ್ತು 10ರಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿತು. ಹೈವೋಲ್ಟೇಜ್ ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡಿತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರೈತರಾದ ಪಾರೀಸ್ ವಾಳ್ವೆ ಹಾಗೂ ನಿಗಂಪ್ಪಾ ಮನಗೋಳಿ ಮಾತನಾಡಿ, "ಇನ್ನೇನು ಕೆಲವೇ ದಿನಗಳಲ್ಲಿ ಕಬ್ಬು ಕಾರ್ಖಾನೆಗೆ ಸಾಗಾಟ ಮಾಡಬೇಕಿತ್ತು. ಈ ಅವಘಡದಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಸರ್ಕಾರ ನಮಗೆ ಆಗಿರುವ ನಷ್ಟ ತುಂಬಿ ಕೊಡಬೇಕು. ಕಾರ್ಖಾನೆ ಪ್ರಾರಂಭವಿದ್ದಾಗ ಘಟನೆ ಸಂಭವಿಸಿದರೆ ಅಲ್ಪಪ್ರಮಾಣದ ಹಾನಿಯಾಗುತ್ತಿತ್ತು. ಆದರೆ ಇನ್ನೂ ಯಾವುದೇ ಸಕ್ಕರೆ ಕಾರ್ಖಾನೆಗಳೂ ಶುರುವಾಗಿಲ್ಲ" ಎಂದು ನೋವು ತೋಡಿಕೊಂಡರು.